ಹೋಸ್ಟನ್(ಸೆ.22): ದೇಶದ ಒಳಿತಿಗಾಗಿ ಕಠಿಣ ನಿರ್ಧಾರಗಳನ್ನು ಕೈಗೊಳ್ಳುವಲ್ಲಿ ಪ್ರಧಾನಿ ಮೋದಿ ನಿಸ್ಸೀಮರು. ಆದರೆ ಅವರದ್ದು ಹೂವಿನಂತ ಮನಸ್ಸು ಎಂಬುದು ಇಡೀ ದೇಶಕ್ಕೆ ಗೊತ್ತಿರುವ ಸಂಗತಿ.

ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ, ಇಂದು ಹೋಸ್ಟನ್‌ನಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೇ ರಾತ್ರಿ 10 ಗಂಟೆಗೆ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದಕ್ಕೂ ಮೊದಲು ಹೂಸ್ಟನ್ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಧಾನಿ ಅವರಿಗೆ ಭವ್ಯ ಸ್ವಾಗತ ನೀಡಲಾಯಿತು. ಅಮೆರಿಕಕ್ಕೆ ಭಾರತೀಯ ರಾಯಭಾರಿ ಹರ್ಷವರ್ಧನ್ ಶ್ರೀಂಗ್ಲಾ ಸೇರಿದಂತೆ, ಭಾರತೀಯ ಹಾಗೂ ಅಮೆರಿಕನ್ ಅಧಿಕಾರಿಗಳು ಮೋದಿ ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡರು.

ಈ ವೇಳೆ ಸೇನಾಧಿಕಾರಿಗಳೊಂದಿಗೆ ಕೈ ಕುಲುಕುವ ವೇಳೆ, ಮೋದಿ ಅವರಿಗೆ ನೀಡಲಾಗಿದ್ದ ಹೂಗುಚ್ಛದಿಂದ ಕೆಳಗೆ ಬಿದ್ದ ಹೂವುಗಳನ್ನು ಎತ್ತಿ ಪ್ರಧಾನಿ ಮೋದಿ ಸರಳತೆ ಮೆರೆದಿದ್ದಾರೆ.

ಹೂಗುಚ್ಛದಿಂದ ಕೆಳಗೆ ಬಿದ್ದ ಹೂವುಗಳನ್ನು ತಾವೇ ಖುದ್ದು ಮೇಲೆತ್ತಿ ಅವುಗಳನ್ನು ತಮ್ಮ ಭದ್ರತಾ ಸಿಬ್ಬಂದಿಗೆ ನೀಡಿದ ವಿಡಿಯೋ ಇದೀಗ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.