Asianet Suvarna News Asianet Suvarna News

ಮೋದಿ ಹವಾ: ವಿದೇಶಿ ನಾಯಕನ ರ‍್ಯಾಲಿಗೆ ‘ದೊಡ್ಡಣ್ಣ’ ಬರುತ್ತಿರೋದು ಇದೇ ಮೊದಲು!

ಅಮೆರಿಕದ ಹೂಸ್ಟನ್‌ನಲ್ಲಿ ಸೆ.22ರಂದು ಅನಿವಾಸಿ ಭಾರತೀಯರು ಆಯೋಜಿಸಿರುವ ‘ಹೌದಿ ಮೋದಿ’ ಕಾರ‍್ಯಕ್ರಮದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದಾರೆ. ಈ ಕಾರ್ಯಕ್ರಮಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ಆಗಮಿಸುತ್ತಿದ್ದಾರೆ. ಉಭಯ ದೇಶದ ನಾಯಕರು ಭಾಗವಹಿಸಲಿರುವ ಈ ಮೆಗಾ ಕಾರ‍್ಯಕ್ರಮಕ್ಕೆ ಇಡೀ ಜಗತ್ತೇ ಕಾತುರದಿಂದ ಕಾಯುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

Trump Modi to address 50000 Indian Americans at Howdy Modi mega event in Houston
Author
Bangalore, First Published Sep 18, 2019, 11:45 AM IST

ಏನಿದು ಹೌದಿ ಮೋದಿ ಸಮಾವೇಶ?

‘ಹೌದಿ ಮೋದಿ’ ಮೇಳವು ಹೂಸ್ಟನ್‌ನ ಅತಿದೊಡ್ಡ ಎನ್‌ಆರ್‌ಜಿ ಸ್ಟೇಡಿಯಂನಲ್ಲಿ ಟೆಕ್ಸಾಸ್‌ ಇಂಡಿಯಾ ವೇದಿಕೆ ಆಯೋಜಿಸಿರುವ ಕಾರ‍್ಯಕ್ರಮ. ಈ ಕಾರ‍್ಯಕ್ರಮದಲ್ಲಿ ಅಮೆರಿಕದಾದ್ಯಂತ ವಾಸಿಸುತ್ತಿರುವ 50,000 ಭಾರತೀಯ ಅನಿವಾಸಿಗಳು ಭಾಗವಹಿಸಲಿದ್ದಾರೆ. ಅವರು ಈಗಾಗಲೇ ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಕಾರ‍್ಯಕ್ರಮಕ್ಕೆ ಭಾಗವಹಿಸುವವರಿಗೆ ಪ್ರವೇಶ ಶುಲ್ಕವಿಲ್ಲ. ಆದರೆ ನೋಂದಣಿ ಕಡ್ಡಾಯ.

‘ಕನಸುಗಳ ವಿನಿಮಯ, ಉಜ್ವಲ ಭವಿಷ್ಯ’ ಈ ಮೇಳದ ಘೋಷವಾಕ್ಯ. ಇದೇ ಭಾನುವಾರ ಅಮೆರಿಕದ ಕಾಲಮಾನ ಬೆಳಿಗ್ಗೆ 10 ಗಂಟೆಗೆ ಕಾರ‍್ಯಕ್ರಮ ಪ್ರಾರಂಭವಾಗಲಿದೆ. ಭಾರತೀಯರು ಭಾನುವಾರ ರಾತ್ರಿ 8:30ರಿಂದ ಕಾರ‍್ಯಕ್ರಮ ವೀಕ್ಷಿಸಬಹುದು. ಹೂಸ್ಟನ್‌ನಲ್ಲಿಯೇ 1,30,000 ಅನಿವಾಸಿ ಭಾರತೀಯರಿದ್ದಾರೆ. ಹೂಸ್ಟನ್‌ ಮತ್ತು ಭಾರತದ ನಡುವೆ 66 ಲಕ್ಷ ಡಾಲರ್‌ ಮೌಲ್ಯದ ವ್ಯಾಪಾರ ನಡೆಯುತ್ತಿದೆ. ಜಗತ್ತಿನ ಅತಿದೊಡ್ಡ ವೈದ್ಯಕೀಯ ಹಬ್‌ ಹಾಗೂ ನಾಸಾದ ವ್ಯೋಮ ಕೇಂದ್ರಗಳು ಇಲ್ಲಿವೆ.

‘ಹೌದಿ ಮೋದಿ’ ಹೆಸರೇಕೆ?

‘ಹೌದಿ’ ಎನ್ನುವುದು ‘ಹೌ ಡು ಯು ಡೂ’ (ಹೇಗಿದ್ದೀರಿ) ಎಂಬುದರ ಸಂಕ್ಷಿಪ್ತ ರೂಪ. ನೈಋುತ್ಯ ಅಮೆರಿಕದಲ್ಲಿ ಈ ಪದ ಹೆಚ್ಚಾಗಿ ಬಳಕೆಯಲ್ಲಿದೆ. ಅದೇ ಹೆಸರಿನಲ್ಲಿ ಈ ರಾರ‍ಯಲಿ ಆಯೋಜಿಸಲಾಗಿದೆ.

ಏನೇನು ಕಾರ್ಯಕ್ರಮ?

- ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಜಂಟಿ ಭಾಷಣ.

- ಭಾರತ ಮತ್ತು ಅಮೆರಿಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ 90 ನಿಮಿಷದ ಸಾಂಸ್ಕೃತಿಕ ಕಾರ‍್ಯಕ್ರಮ, ಇದರಲ್ಲಿ 400 ಕಲಾವಿದರು ಭಾಗಿ.

ಅಮೆರಿಕದಲ್ಲಿ ಇದು ದಾಖಲೆಯ ರ‍್ಯಾಲಿ!

ಭಾರತೀಯ ಸಮುದಾಯದವರು ಆಯೋಜಿಸಿರುವ ಕಾರ‍್ಯಕ್ರಮದಲ್ಲಿ ಪ್ರಪ್ರಥಮ ಬಾರಿಗೆ ಅಮೆರಿಕದ ಅಧ್ಯಕ್ಷ ಟ್ರಂಪ್‌ ಭಾಗವಹಿಸಲಿದ್ದಾರೆ. ಜಗತ್ತಿನ ಅತಿದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳ ಉಭಯ ನಾಯಕರು ಒಂದೇ ವೇದಿಕೆ ಹಂಚಿಕೊಳ್ಳುತ್ತಿರುವುದರಿಂದ ಈ ಮೇಳವು ಸಾಕಷ್ಟುನಿರೀಕ್ಷೆಗಳನ್ನು ಹುಟ್ಟುಹಾಕಿದೆ. ವಿಶ್ವದಲ್ಲಿಯೇ ಇತ್ತೀಚಿನ ವರ್ಷಗಳಲ್ಲಿ ಬೃಹತ್‌ ರಾರ‍ಯಲಿಯನ್ನು ಉದ್ದೇಶಿಸಿ ಉಭಯ ರಾಷ್ಟ್ರಗಳ ಮುಖಂಡರು ಮಾತನಾಡುವುದು ಇದೇ ಮೊದಲು. ಇದನ್ನು ಭಾರತ ಮತ್ತು ಅಮೆರಿಕ ನಡುವಣ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸುವ ಅತಿದೊಡ್ಡ ಅವಕಾಶ ಎಂತಲೇ ಪರಿಗಣಿಸಲಾಗುತ್ತಿದೆ. ಭಾರತ-ಅಮೆರಿಕದ ವಾಣಿಜ್ಯೋದ್ಯಮ ಸೇರಿದಂತೆ ಇತರ ವ್ಯಾಪಾರ ಉದ್ಯಮಕ್ಕೂ ಈ ಮೆಗಾ ಕಾರ‍್ಯಕ್ರಮ ಸಹಕಾರಿಯಾಗಲಿದೆ.

ಅಲ್ಲದೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಅಮೆರಿಕದ ಅಧ್ಯಕ್ಷ ಟ್ರಂಪ್‌ ಓಗೊಟ್ಟು ಕಾರ‍್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಎರಡು ದೇಶಗಳ ದ್ವಿಪಕ್ಷೀಯ ಸಂಬಂಧಕ್ಕೆ ಸಿಕ್ಕ ಬಹುದೊಡ್ಡ ಜಯ ಎಂದು ಬಣ್ಣಿಸಲಾಗುತ್ತಿದೆ. ಅಲ್ಲದೆ ಅಮೆರಿಕದ ರಾಜಕಾರಣಿಯಲ್ಲದ ಬೇರೊಂದು ದೇಶದ ರಾಜಕೀಯ ನಾಯಕರ ಆಗಮನಕ್ಕೆ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಜನರು ಆಗಮಿಸುತ್ತಿರುವುದು ಇದೇ ಮೊದಲು.

ಏಕೆ ಈ ಸಮಾವೇಶ ಅಷ್ಟೊಂದು ಮುಖ್ಯ?

ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರಗಳ ಉಭಯ ನಾಯಕರಿಬ್ಬರು ಭಾಗವಹಿಸುತ್ತಿರುವುದೇ ಈ ಕಾರ‍್ಯಕ್ರಮದ ವಿಶೇಷ. ಇತ್ತೀಚೆಗೆ ಅಮೆರಿಕ ಮತ್ತು ಭಾರತದ ನಡುವಣ ವ್ಯಾಪಾರ ಸಂಬಂಧ ಅಲ್ಪಮಟ್ಟಿಗೆ ಹದಗೆಟ್ಟಿದೆ. ಅಮೆರಿಕವು ಭಾರತಕ್ಕೆ ತನ್ನ ದೇಶದಲ್ಲಿ ನೀಡುತ್ತಿದ್ದ ಸುಂಕರಹಿತ ಪ್ರಯೋಜನಗಳನ್ನು ರದ್ದುಗೊಳಿಸಿದೆ. ಅದಕ್ಕೆ ಪ್ರತೀಕಾರವಾಗಿ ಭಾರತವೂ ಕೂಡ 28 ಅಮೆರಿಕನ್‌ ಉತ್ಪನ್ನಗಳ ಮೇಲಿನ ಸುಂಕವನ್ನು ಹೆಚ್ಚಿಸಿದೆ. ಆದರೆ ಈ ಭೇಟಿ ಬಳಿಕ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ಸಂಬಂಧ ಇನ್ನಷ್ಟುವೃದ್ಧಿಯಾಗಬಹುದೆಂಬ ನಿರೀಕ್ಷೆ ಇದೆ.

ಪ್ರಧಾನಿ ಮೋದಿ ಈ ಭೇಟಿಯಲ್ಲಿ ಇನ್ನೂ 400 ಕೋಟಿ ಡಾಲರ್‌ ಇಂಧನವನ್ನು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಒಪ್ಪಂದ ಮಾಡಿಕೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಹಾಗೆಯೇ ಅಮೆರಿಕದ ಇಂಧನ ಕ್ಷೇತ್ರದಲ್ಲಿ ಭಾರತ ಹೂಡಿಕೆ ಮಾಡುವ ನಿರೀಕ್ಷೆ ಇದೆ. ಜೊತೆಗೆ ಈ ಬೃಹತ್‌ ಕಾರ‍್ಯಕ್ರಮದ ಮೂಲಕ ಅಮೆರಿದಲ್ಲಿ ಭಾರತ ಮತ್ತು ಅನಿವಾಸಿ ಭಾರತೀಯರ ಪ್ರಭಾವ ಹೆಚ್ಚಲಿದೆ.

ಟ್ರಂಪ್‌ಗೆ ಎಲೆಕ್ಷನ್‌ ಗೆಲ್ಲಲು ಮೋದಿ ಅಸ್ತ್ರ?

2020ರಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತದೆ. ಈ ಚುನಾವಣೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಧಾನಿ ಮೋದಿ ಅವರ ಪ್ರಭಾವ ಬಳಸಿ ಅವರ ಅನುಯಾಯಿಗಳ ಮತ ಸೆಳೆಯಬಹುದು ಎಂಬ ಉದ್ದೇಶ ಟ್ರಂಪ್‌ಗೆ ಇದ್ದಿರಬಹುದು ಎಂದು ಹೇಳಲಾಗುತ್ತಿದೆ. 2 ಕೋಟಿ ಏಷ್ಯನ್‌ ಅಮೆರಿಕನ್ನರಲ್ಲಿ ಐದನೇ ಒಂದು ಭಾಗ ಭಾರತೀಯರು. ಇವರು ಹೆಚ್ಚು ವಿದ್ಯಾವಂತರು ಮತ್ತು ಇತರ ವಲಸೆಗಾರ ಗುಂಪುಗಳಿಗಿಂತ ಹೆಚ್ಚು ಗಳಿಸುತ್ತಿದ್ದಾರೆ ಎಂದು ವಾಷಿಂಗ್ಟನ್‌ ಮೂಲದ ಪ್ಯೂ ರೀಸಚ್‌ರ್‍ ಸೆಂಟರ್‌ ಹೇಳಿದೆ. ಆದರೆ 2014ರಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ ಸುಮಾರು 65% ಭಾರತೀಯ ಅಮೆರಿಕನ್ನರು ಡೆಮೋಕ್ರಾಟ್‌ ಪಕ್ಷದೆಡೆಗೆ ಒಲವು ಹೊಂದಿದ್ದಾರೆ.

ಟ್ರಂಪ್‌ ರಿಪಬ್ಲಿಕನ್‌ ಪಕ್ಷದವರು. ಅವರಿಗೆ ಈ ಟ್ರೆಂಡನ್ನು ಬದಲಿಸಬೇಕಾದ ಅನಿವಾರ‍್ಯತೆ ಇದೆ. ಅದಕ್ಕೆ ಈ ವೇದಿಕೆ ಅವಕಾಶ ನೀಡಲಿದೆ. 2016ರ ಅಕ್ಟೋಬರ್‌ನಲ್ಲಿ ರಿಪಬ್ಲಿಕನ್‌ ಪಕ್ಷದ ಅಧ್ಯಕ್ಷ ಸ್ಥಾನದ ಅಭ್ಯರ್ಥಿಯಾಗಿದ್ದಲೂ ಡೊನಾಲ್ಡ್‌ ಟ್ರಂಪ್‌ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಚುನಾವವಣೆಯಲ್ಲಿ ಭಾರತೀಯ ಅಮೆರಿಕನ್ನರನ್ನು ಉದ್ದೇಶಿಸಿ ಮಾತನಾಡಿರುವ ಏಕಮಾತ್ರ ನಾಯಕ ಟ್ರಂಪ್‌ ಆಗಿದ್ದಾರೆ.

ಒಂದೇ ವರ್ಷದಲ್ಲಿ ಮೋದಿ-ಟ್ರಂಪ್‌ 3ನೇ ಭೇಟಿ

ಪ್ರಸಕ್ತ ವರ್ಷ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕ ಅಧ್ಯಕ್ಷ ಟ್ರಂಪ್‌ ಸತತ ಮೂರನೇ ಬಾರಿಗೆ ಭೇಟಿಯಾಗುತ್ತಿದ್ದಾರೆ. ಉಭಯ ಮುಖಂಡರು ಕಳೆದ ತಿಂಗಳು ಫ್ರಾನ್ಸ್‌ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಮುಖಾಮುಖಿಯಾಗಿದ್ದರು. ಒಸಾಕದಲ್ಲಿ ನಡೆದ ಜಿ-20 ಸಮಾವೇಶದಲ್ಲೂ ಭೇಟಿಯಾಗಿದ್ದರು. ಇದೀಗ ಮೂರನೇ ಭಾರಿಗೆ ಭೇಟಿಯಾಗುತ್ತಿದ್ದಾರೆ. ಇದು ಭಾರತ ಮತ್ತು ಅಮೆರಿಕದ ಸಂಬಂಧ ಗಟ್ಟಿಯಾಗುತ್ತಿರುವುದರ ಸಂಕೇತ ಎಂದೇ ಬಣ್ಣಿಸಲಾಗುತ್ತಿದೆ.

ಪ್ರಧಾನಿ ಭಾಷಣಕ್ಕೆ ನೀವೂ ಸಲಹೆ ಕೊಡಬಹುದು!

ಹೂಸ್ಟನ್‌ನಲ್ಲಿ ಭಾನುವಾರ ನಡೆಯಲಿರುವ ಹೌದಿ ಮೋದಿ ಮೆಗಾ ಕಾರ್ಯಕ್ರಮದ ಭಾಷಣಕ್ಕೆ ಪ್ರಧಾನಿ ಮೋದಿ ಜನರ ಸಲಹೆಗಳನ್ನು ಆಹ್ವಾನಿಸಿದ್ದಾರೆ. ನನ್ನ ಭಾಷಣಕ್ಕೆ ನಿಮ್ಮ ಅಮೂಲ್ಯ ಸಲಹೆಗಳನ್ನು ನೀಡಿ ಎಂದು ಮೋದಿ ಅವರು ದೇಶವಾಸಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ. ದೇಶದ ಜನತೆ ನೀಡುವ ಕೆಲ ಅತ್ಯುತ್ತಮ ಸಲಹೆಗಳನ್ನು ಭಾಷಣದಲ್ಲಿ ಉಲ್ಲೇಖಿಸುವುದಾಗಿ ಅವರೇ ಟ್ವೀಟ್‌ ಮಾಡಿದ್ದಾರೆ. ನಮೋ ಆ್ಯಪ್‌ ಮೂಲಕ ಅಭಿಪ್ರಾಯ ಹಂಚಿಕೊಳ್ಳಬಹುದು.

ಅಮೆರಿಕದ ಎನ್ನಾರೈಗಳ ಜೊತೆ ಮೋದಿ 3ನೇ ರ‍್ಯಾಲಿ

ಭಾರತೀಯ ಅಮೆರಿಕನ್ನರು ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಏರ್ಪಡಿಸುತ್ತಿರುವ 3ನೇ ಮೆಗಾ ರಾರ‍ಯಲಿ ಇದು. 2014ರಲ್ಲಿ ಮೊಟ್ಟಮೊದಲಿಗೆ ಪ್ರಧಾನಿಯಾದ ನಂತರ ನ್ಯೂಯಾರ್ಕ್ನ ಮ್ಯಾಡಿಸನ್‌ ಸ್ವೈರ್‌ ಗಾರ್ಡನ್‌ನಲ್ಲಿ ಹಾಗೂ ನಂತರ 2016ರಲ್ಲಿ ಸಿಲಿಕಾನ್‌ ವ್ಯಾಲಿಯಲ್ಲಿ ಏರ್ಪಡಿಸಿದ್ದ ಕಾರ‍್ಯಕ್ರಮಗಳಲ್ಲಿಯೂ ಮೋದಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದ್ದರು. ಎರಡೂ ಕಾರ‍್ಯಕ್ರಮದಲ್ಲಿ 20,000 ಜನರು ಭಾಗವಹಿಸಿದ್ದರು.

ಒಂದು ವಾರದ ಅಮೆರಿಕ ಟ್ರಿಪ್‌

ಪ್ರಧಾನಿ ‘ಹೌದಿ ಮೋದಿ’ ಕಾರ‍್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸೆ.23ರಂದು ನ್ಯೂಯಾರ್ಕ್ನಲ್ಲಿ ವಿಶ್ವಂಸ್ಥೆಯ ಮಹಾ ಕಾರ‍್ಯದರ್ಶಿ ಆಂಟೋನಿಯೋ ಗುಟೆರಸ್‌ ಏರ್ಪಡಿಸಿರುವ ಜಾಗತಿಕ ತಾಪಮಾನ ಕ್ರಿಯಾ ಶೃಂಗದಲ್ಲಿ ಭಾಗವಹಿಸಲಿದ್ದಾರೆ. ಸೆ.24ರಂದು ವಿಶ್ವಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಮಹಾತ್ಮಾ ಗಾಂಧಿ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಂದು ಸ್ವಚ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ಬಿಲ್‌ ಮತ್ತು ಮೆಲಿಂಡಾ ಗೇಟ್ಸ್‌ ವೇದಿಕೆ ನೀಡಲಿರುವ ‘ಗ್ಲೋಬಲ್‌ ಗೋಲ್‌ಕೀಪರ್‌’ ಪ್ರಶಸ್ತಿಯನ್ನು ಸ್ವೀಕರಿಸಲಿದ್ದಾರೆ. ಸೆ.27ರಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. ಇದೇ ದಿನ ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಕೂಡ ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಲಿದ್ದಾರೆ. ಹಾಗೆಯೇ ಮೋದಿ ಹೂಸ್ಟನ್‌ನಲ್ಲಿರುವ ಇಂಧನ ಕಂಪನಿಗಳ ಸಿಇಒಗಳನ್ನು ಭೇಟಿ ಮಾಡಬಹುದು.

ಇಲ್ಲಿಯವರೆಗಿನ ಮೋದಿ ಫಾರಿನ್‌ ರ‍್ಯಾಲಿಗಳು

- ಫ್ರಾನ್ಸ್‌: ಪ್ಯಾರಿಸ್‌ ಕಮ್ಯುನಿಟಿ ಇವೆಂಟ್‌ (2019)

- ಅಮೆರಿಕ: ಸಿಲಿಕಾನ್‌ ವ್ಯಾಲಿಯಲ್ಲಿ ರಾರ‍ಯಲಿ (2016)

- ಬ್ರಿಟನ್‌: ಲಂಡನಿನ ವೆಂಬ್ಲೇ ಸ್ಟೇಡಿಯಂ ಕಾರ‍್ಯಕ್ರಮ (2015)

- ಯುಎಇ: ದುಬೈನ ಕ್ರಿಕೆಟ್‌ ಸ್ಟೇಡಿಯಂ (2015)

- ಅಮೆರಿಕ: ಮ್ಯಾಡಿಸನ್‌ ಸ್ಕ್ವೇರ್‌ ಗಾರ್ಡನ್‌ (2014)

- ಆಸ್ಪ್ರೇಲಿಯಾ: ಸಿಡ್ನಿಯ ಒಲಿಂಪಿಕ್‌ ಪಾರ್ಕ್ನಲ್ಲಿ ರ‍್ಯಾಲಿ (2014)

Follow Us:
Download App:
  • android
  • ios