ನವದೆಹಲಿ  (ನ.03): ಮಾಜಿ ಸೈನಿಕ ಆತ್ಮಹತ್ಯೆ ಸಂಬಂಧ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಕೇಂದ್ರ ಸರ್ಕಾರವು ಭಾರತೀಯ ಸೇನೆಯನ್ನು  ಚುನಾವಣಾ ಲಾಭಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಹೇಳಿರುವ ಕೇಜ್ರಿವಾಲ್, ಸಮಾನ ಪಿಂಚಣಿ ಅನುಷ್ಠಾನದ ವಿಚಾರದಲ್ಲಿ ಪ್ರಧಾನಿ ಮೋದಿ ಸುಳ್ಳು ಹೇಳುತ್ತಿದ್ದಾರೆ ಹಾಗೂ ಯೋಧರ ಹಕ್ಕುಗಳನ್ನು ಅವರು ಕಸಿಯುತ್ತಿದ್ದಾರೆ, ಎಂದು ಆರೋಪಿಸಿದ್ದಾರೆ.

ಸರ್ಜಿಕಲ್ ದಾಳಿ ನಡೆದ ಬೆನ್ನಲ್ಲೇ, ಮೋದಿ ಸರ್ಕಾರವು ಗಾಯಗೊಂಡು ನಿವೃತ್ತಿ ಹೊಂದಿದ ಯೋಧರ ಪಿಂಚಣಿಯಲ್ಲಿ ಕಡಿತಗೊಳಿಸಿರುವುದನ್ನು ಪ್ರಸ್ತಾಪಿಸಿದ ಅವರು, ಪ್ರಧಾನಿ ಮೋದಿ ಯೋಧರ ಹಾಗೂ ದೇಶದ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಮೃತ ಯೋಧನ ಕುಟುಂಬವನ್ನು ಭೇಟಿ ಮಾಡಲು ಪೊಲೀಸರು ಅವಕಾಶ ನೀಡುತ್ತಿಲ್ಲ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.

ನನ್ನ ವಾಹನವನ್ನು ಸುತ್ತುವರೆದಿರುವ ಪೊಲೀಸರು ನನಗೆ ಮೃತ ಯೋಧನ ಕುಟುಂಬ ಸದಸ್ಯರನ್ನು ಭೇಟಿ ಮಾಡಲು ಬಿಟ್ಟಿಲ್ಲ. ಒಆರ್‌ಒಪಿ ಅನುಷ್ಠಾನ ಮಾಡಲಾಗಿದೆ ಎಂದು ದೇಶಕ್ಕೆ ಪ್ರಧಾನಿ ಸುಳ್ಳು ಹೇಳುತ್ತಿದ್ದಾರೆ. ಅದು ಅನುಷ್ಠಾನವಾಗಿದ್ದರೆ ನಿವೃತ್ತ ಯೋಧ ಗ್ರೆವಾಲ್‌ ಯಾಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು? ಎಂದು ಕೇಜ್ರಿವಾಲ್ ನಿನ್ನೆ ಟ್ವೀಟ್ ಮಾಡಿದ್ದರು.