ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಕರ್ನಾಟಕಕ್ಕೆ ಭರ್ಜರಿ ಉಡುಗೊರೆ ನೀಡಿದೆ. ರಾಜ್ಯದ 8 ಜಿಲ್ಲೆಗಳು ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ವಾಹನಗಳಿಗೆ ‘ಸಾಂದ್ರೀಕೃತ ನೈಸರ್ಗಿಕ ಅನಿಲ’ (ಸಿಎನ್‌ಜಿ) ಹಾಗೂ ಮನೆಮನೆಗೆ ‘ಪೈಪ್‌ ಮೂಲಕ ನೈಸರ್ಗಿಕ ಅನಿಲ’ (ಪಿಎನ್‌ಜಿ) ಪೂರೈಕೆ ಮಾಡುವ 22 ಸಾವಿರ ಕೋಟಿ ರುಪಾಯಿ ಮೊತ್ತದ ಯೋಜನೆಗೆ ಚಾಲನೆ ನೀಡಿದ್ದಾರೆ.

ನವದೆಹಲಿ :  ಕರ್ನಾಟಕದ 8 ಜಿಲ್ಲೆಗಳು ಸೇರಿದಂತೆ ದೇಶದ 129 ಜಿಲ್ಲೆಗಳಲ್ಲಿ ವಾಹನಗಳಿಗೆ ‘ಸಾಂದ್ರೀಕೃತ ನೈಸರ್ಗಿಕ ಅನಿಲ’ (ಸಿಎನ್‌ಜಿ) ಹಾಗೂ ಮನೆಮನೆಗೆ ‘ಪೈಪ್‌ ಮೂಲಕ ನೈಸರ್ಗಿಕ ಅನಿಲ’ (ಪಿಎನ್‌ಜಿ) ಪೂರೈಕೆ ಮಾಡುವ 22 ಸಾವಿರ ಕೋಟಿ ರುಪಾಯಿ ಮೊತ್ತದ ಯೋಜನೆಗೆ ನರೇಂದ್ರ ಮೋದಿ ಅವರು ಗುರುವಾರ ಸಂಜೆ ಶಂಕುಸ್ಥಾಪನೆ ನೆರವೇರಿಸಿದರು. ಇದೇ ವೇಳೆ ಕರ್ನಾಟಕದ 14 ಜಿಲ್ಲೆಗಳಲ್ಲಿ ಮನೆಮನೆಗೆ ಅಡುಗೆ ಅನಿಲ ಪೂರೈಸುವ ಯೋಜನೆಯ 10ನೇ ಸುತ್ತಿನ ಬಿಡ್ಡಿಂಗ್‌ಗೂ ಅವರು ಚಾಲನೆ ನೀಡಿದರು.

ಈ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ, ರಾಮನಗರ, ಚಿತ್ರದುರ್ಗ, ದಾವಣಗೆರೆ, ಬೀದರ್‌, ಬಳ್ಳಾರಿ ಹಾಗೂ ಗದಗ ಜಿಲ್ಲೆಗಳಲ್ಲಿ ಮನೆಮನೆಗೆ ಪೈಪ್‌ ಮೂಲಕ ಅನಿಲ ಪೂರೈಕೆ ಹಾಗೂ ವಾಹನಗಳಿಗೆ ನೈಸರ್ಗಿಕ ಅನಿಲ ಪೂರೈಕೆ ಇನ್ನು ಹಲವು ವರ್ಷಗಳಲ್ಲಿ ಸಾಕಾರಗೊಳ್ಳಲಿದೆ.

ಇದೇ ವೇಳೆ, ಮುಂದಿನ ಹಂತದ (10ನೇ ಹಂತ) ಬಿಡ್ಡಿಂಗ್‌ ಕೂಡ ಆರಂಭವಾಗಲಿದ್ದು, ಇದರಲ್ಲಿ ಕರ್ನಾಟಕದ 14 ಜಿಲ್ಲೆಗಳಿವೆ. ಬಾಗಲಕೋಟೆ, ಕೊಪ್ಪಳ, ರಾಯಚೂರು, ಚಿಕ್ಕಮಗಳೂರು, ಹಾಸನ, ಕೊಡಗು, ಕಲಬುರಗಿ, ವಿಜಯಪುರ, ಮಂಡ್ಯ, ಮೈಸೂರು, ಚಾಮರಾಜನಗರ, ಉತ್ತರ ಕನ್ನಡ, ಹಾವೇರಿ, ಶಿವಮೊಗ್ಗ ಜಿಲ್ಲೆಗಳಲ್ಲಿ 10ನೇ ಸುತ್ತಿನಲ್ಲಿ ಯೋಜನೆ ಜಾರಿಗೊಳ್ಳಲಿದೆ.

ಯಾರಾರ‍ಯರಿಗೆ ಹೊಣೆ?:

9ನೇ ಸುತ್ತಿನ ಬಿಡ್ಡಿಂಗ್‌ನಲ್ಲಿ ಯಶಸ್ವಿಯಾದ ವಿವಿಧ ಕಂಪನಿಗಳು ಕರ್ನಾಟಕದ 8 ಜಿಲ್ಲೆಗಳಲ್ಲಿ ಅನಿಲ ಪೂರೈಕೆ ಮಾಡುವ ಗುತ್ತಿಗೆ ಪಡೆದುಕೊಂಡಿವೆ. ರಾಮನಗರ ಜಿಲ್ಲೆಯ ಅನಿಲ ಪೂರೈಕೆ ಬಿಡ್ಡಿಂಗ್‌ ಮಹಾರಾಷ್ಟ್ರ ನೈಸರ್ಗಿಕ ಅನಿಲ ನಿಯಮಿತ (ಎಂಜಿಎನ್‌ಎಲ್‌)ಗೆ, ದಕ್ಷಿಣ ಕನ್ನಡ (ಜಿಐಎಎಲ್‌), ಉಡುಪಿ (ಅದಾನಿ ಸಮೂಹ), ಚಿತ್ರದುರ್ಗ ಹಾಗೂ ದಾವಣಗೆರೆ (ಯುನಿಸನ್‌ ಎನ್ವಿರೊ ಪ್ರೈ.ಲಿ.), ಬೀದರ್‌, ಬಳ್ಳಾರಿ ಹಾಗೂ ಗದಗ (ಭಾರತ್‌ ಗ್ಯಾಸ್‌ ರಿಸೋರ್ಸಸ್‌ ಲಿ.)- ಕಂಪನಿಗಳ ಪಾಲಾಗಿದೆ.

ಈ ಬಗ್ಗೆ ಮಾಧ್ಯಮವೊಂದಕ್ಕೆ ಮಾಹಿತಿ ನೀಡಿದ ಎಂಜಿಎನ್‌ಎಲ್‌ನ ಅಧಿಕಾರಿಯೊಬ್ಬರು ‘ಎಂಜಿಎನ್‌ಎಲ್‌ಗೆ ರಾಮನಗರ ಜಿಲ್ಲೆಯ ಅನಿಲ ಪೂರೈಕೆ ಗುತ್ತಿಗೆ ಲಭಿಸಿದೆ. ಇದಕ್ಕಾಗಿ ನಾವು 8 ವರ್ಷಗಳ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ. 300 ಕೋಟಿ ರುಪಾಯಿ ಬಂಡವಾಳವನ್ನು ಹೂಡುತ್ತಿದ್ದೇವೆ. ಜಿಲ್ಲೆಯ 1.13 ಲಕ್ಷ ಮನೆಗಳಿಗೆ ನೇರ ಅನಿಲ ಸಂಪರ್ಕದ ಉದ್ದೇಶ ಇಟ್ಟುಕೊಂಡಿದ್ದೇವೆ. ಇದಕ್ಕಾಗಿ 37 ಸಿಎನ್‌ಜಿ ಸ್ಟೇಶನ್‌ಗಳನ್ನು ಸ್ಥಾಪಿಸುತ್ತಿದ್ದೇವೆ. 354 ಇಂಚು ಕಿಲೋಮೀಟರ್‌ನಷ್ಟುಅನಿಲ ಕೊಳವೆ ಜಾಲವನ್ನು ರಾಮನಗರ ಜಿಲ್ಲೆಯಲ್ಲಿ ನಿರ್ಮಿಸಲಿದ್ದೇವೆ’ ಎಂದರು.

400 ಜಿಲ್ಲೆಗೆ ವಿಸ್ತಾರ

ಈಗ ಈ ಹಂತದ 129 ಜಿಲ್ಲೆಗಳು ಸೇರಿ ದೇಶದ ದೇಶದ ಒಟ್ಟು 174 ಜಿಲ್ಲೆಗಳಲ್ಲಿ ಪೈಪ್‌ ಮೂಲಕ ಅನಿಲ ಸಂಪರ್ಕ ಕಲ್ಪಿಸುವ ಯೋಜನೆ ಪ್ರಗತಿಯಲ್ಲಿದೆ. ಮುಂದಿನ 2-3 ವರ್ಷದಲ್ಲಿ 400 ಜಿಲ್ಲೆಗಳಿಗೆ ಇದರ ವ್ಯಾಪ್ತಿ ವಿಸ್ತಾರವಾಗಲಿದೆ. ಕಳೆದ 4 ವರ್ಷದಲ್ಲಿ ಪಿಎನ್‌ಜಿ ಸಂಪರ್ಕ ದ್ವಿಗುಣಗೊಂಡಿದ್ದು, 50 ಲಕ್ಷ ಮನೆಗಳಿಗೆ ಪೂರೈಸಲಾಗುತ್ತಿದೆ. ಇದನ್ನು ಒಟ್ಟು 2 ಕೋಟಿ ಮನೆಗಳಿಗೆ ಏರಿಸುವ ಗುರಿ ಹೊಂದಿದ್ದೇವೆ. 10 ಸಾವಿರ ಸಿಎನ್‌ಜಿ ಪಂಪ್‌ಗಳೂ ಆರಂಭವಾಗಲಿವೆ. ಇದು ಸ್ವಚ್ಛ ಇಂಧನವಾಗಿದ್ದು, ಪೆಟ್ರೋಲ್‌-ಡೀಸೆಲ್‌ ಮೇಲಿನ ಅವಲಂಬನೆ ತಪ್ಪಿಸಿ ಹವಾಮಾನ ಬದಲಾವಣೆಯ ಒಪ್ಪಂದ ಸಾಕಾರಗೊಳಿಸುವಲ್ಲಿ ನೆರವಾಗಲಿದೆ.

- ನರೇಂದ್ರ ಮೋದಿ, ಪ್ರಧಾನಿ


ಕರ್ನಾಟಕದಲ್ಲಿನ ಯೋಜನೆ ವಿವರ

ಜಿಲ್ಲೆ ಪಿಎನ್‌ಜಿ ಸಂಪರ್ಕ ಸಿಎನ್‌ಜಿ ಸ್ಟೇಶನ್‌ ಪೈಪ್‌ಲೈನ್‌ (ಇಂಚ್‌ ಕಿಮೀ)

ಚಿತ್ರದುರ್ಗ/ದಾವಣಗೆರ 1.01 ಲಕ್ಷ 42 75

ಉಡುಪಿ 1.20 ಲಕ್ಷ 11 569

ಬಳ್ಳಾರಿ/ಗದಗ 54 ಸಾವಿರ 24 1365

ಬೀದರ್‌ 6,200 4 143

ದಕ್ಷಿಣ ಕನ್ನಡ 3.50 ಲಕ್ಷ 100 1250

ರಾಮನಗರ 1.13 ಲಕ್ಷ 37 354