ಹೈದರಾಬಾದ್'ನ ಮೊದಲ ಹಂತದ ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ನವದೆಹಲಿ (ನ.28): ಹೈದರಾಬಾದ್'ನ ಮೊದಲ ಹಂತದ ಮೆಟ್ರೋ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಇಂದು ಚಾಲನೆ ನೀಡಿದರು.

ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಜೊತೆಯಲ್ಲಿ ಮಿಯಾಪುರ್ ಮತ್ತು ಕುಕತ್'ಪಲ್ಲಿ ನಡುವೆ ಮೆಟ್ರೋದಲ್ಲಿ ಪ್ರಯಾಣಿಸುವ ಮೂಲಕ ಚಾಲನೆ ನೀಡಿದರು.

ಮೆಟ್ರೋದಲ್ಲಿ ಪ್ರಯಾಣ ಮಾಡುವ ವೇಳೆ, ಪ್ರಧಾನಿ ನರೇಂದ್ರ ಮೋದಿ, ನಾವು ಸಹಕಾರ ಪದ್ಧತಿಯಲ್ಲಿ ನಂಬಿಕೆಯಿಟ್ಟಿದ್ದೇವೆ. ನಾವು ಅಧಿಕಾರದಲ್ಲಿ ಇಲ್ಲದೇ ಇರುವ ರಾಜ್ಯಗಳಲ್ಲಿ ನಾವು ಭೇದ-ಭಾವ ತೋರುತ್ತಿಲ್ಲ. ದೇಶದ ಸಮಗ್ರ ಅಭಿವೃದ್ದಿಗೆ ನಾವು ಬದ್ಧರಾಗಿದ್ದೇವೆ ಎಂದು ಹೇಳಿದರು.

ಹೈದರಾಬಾದ್'ನಲ್ಲಿ ನಡೆಯುತ್ತಿರುವ ಜಾಗತಿಕ ಉದ್ಯಮಿಗಳ ಶೃಂಗಸಭೆಯ ಬಗ್ಗೆ ಉಲ್ಲೇಖಿಸುತ್ತಾ, ಇಂದು ಜಗತ್ತಿನ ಕಣ್ಣು ಹೈದರಾಬಾದ್'ನ ಮೇಲೆ ನೆಟ್ಟಿದೆ. ಈ ನಗರವು ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಟಿತ ಶೃಂಗಸಭೆಯನ್ನು ಆಯೋಜಿಸಿದೆ. ಬೇರೆ ಬೇರೆ ದೇಶಗಳ ಉದ್ಯಮಿಗಳು ಇದರಲ್ಲಿ ಭಾಗಿಯಾಗಿದ್ದಾರೆ. ಇದು ನಮ್ಮ ಹೆಮ್ಮೆ ಎಂದು ಮೋದಿ ಹೇಳಿದರು.

ಮೊದಲ ಹಂತದ ಮೆಟ್ರೋ 30 ಕಿಮೀ ಅಂತರವನ್ನು ಹೊಂದಿದ್ದು ಒಟ್ಟು 24 ಸ್ಟೇಷನ್'ಗಳನ್ನು ಕವರ್ ಮಾಡುತ್ತದೆ. ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಮೆಟ್ರೋ ಸೇವೆ ಇರಲಿದೆ. ವಿಕಲಚೇತನರಿಗೆ, ವೀಲ್'ಚೇಲರ್'ಗಳಿಗೆ ಮೆಟ್ರೋದಲ್ಲಿ ವಿಶೇಷ ಆಸನ ವ್ಯವಸ್ಥೆ ಇದೆ.