ಸಂಪುಟಕ್ಕೆ ಸರ್ಜರಿ ಮಾಡಿದ್ದಾಯ್ತು ಮೋದಿ ಚಿತ್ತ ಈಗ ಹಿತಶತ್ರು ದೇಶ ಚೀನಾದತ್ತ ನೆಟ್ಟಿದೆ. ಸುಮಾರು 2 ತಿಂಗಳ ಸೇನಾ ಸಂಘರ್ಷ ಅಂತ್ಯಗೊಳಿಸಲು ಭಾರತ-ಚೀನಾ ಮಹತ್ವದ ನಿರ್ಧಾರ ಬೆನ್ನಲ್ಲೇ ಮೋದಿ ಚೀನಾ ಪ್ರವಾಸ ಕೈಗೊಂಡಿದ್ದು 9ನೇ ಬ್ರಿಕ್ಸ್ ಶೃಂಗಸಭೆಯಲ್ಲಿಭಾಗವಹಿಸಲಿದ್ದಾರೆ. ಮೋದಿ ಚೀನಾ ಪ್ರವಾಸ ಕುತೂಹಲ ಮೂಡಿಸಿದ್ದು ಸಕಾರಾತ್ಮಕ ಬೆಳವಣಿಗೆಗಳನ್ನು ನಿರೀಕ್ಷಿಸಲಾಗಿದೆ.

ಬೀಜಿಂಗ್(ಸೆ.04): ಕೇಂದ್ರ ಸಂಪುಟ ಪುನಾರಚನೆ ಬಳಿಕ ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದಾರೆ. ಚೀನಾದ ಬಂದರು ನಗರಿ ಕ್ಷಿಯಾಮೆನ್‍ನಲ್ಲಿ ಇಂದಿನಿಂದ 9ನೇ ಬ್ರಿಕ್ಸ್ ಶೃಂಗಸಭೆ ನಡೆಯಲಿದ್ದು ಪ್ರಧಾನಿ ಮೋದಿ ಭಾಗವಹಿಸಲಿದ್ದಾರೆ. ಮೋದಿ ಕೈಗೊಂಡ ಈ ವಿದೇಶಿ ಪ್ರವಾಸ ಫಲಪ್ರದದ ನಡುವೆ ಹಿತಶತ್ರು ಚೀನಾಗೆ ತೆರಳಿರುವುದು ಕುತೂಹಲ ಮೂಡಿಸಿದೆ.

ಭಾರತ - ಚೀನಾ ದ್ವಿಪಕ್ಷೀಯ ಮಾತುಕತೆ: ಉಗ್ರ ನಿಗ್ರಹಕ್ಕೆ ಚೀನಾ ಮೇಲೆ ಒತ್ತಡ?

ಇನ್ನು ಸಕಾರಾತ್ಮಕ ಫಲಿತಾಂಶಗಳ ನಿರೀಕ್ಷೆಯೊಂದಿಗೆ ಬ್ರಿಕ್ಸ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲಿರುವ ಮೋದಿ ಚೀನಾ ಅಧ್ಯಕ್ಷರ ಜೊತೆ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಬಹುಮುಖ್ಯವಾಗಿ ಗಡಿ ವಿವಾದದ ಚರ್ಚೆ ನಡೆಸಲಿದ್ದಾರೆ. ಅಲ್ಲದೆ ಉಗ್ರ ನಿಗ್ರಹಕ್ಕೆ ಚೀನಾ ಮೇಲೆ ಮೋದಿ ಒತ್ತಡ ಹೇರುವ ಸಾಧ್ಯತೆ ಇದೆ.

ಇನ್ನೂ ಬ್ರಿಕ್ಸ್ ಶೃಂಗಸಭೆಯಲ್ಲಿ ಉತ್ತರ ಕೊರಿಯಾ ನಡೆಸಿರುವ ಹೈಡ್ರೋಜನ್ ಬಾಂಬ್ ಪರೀಕ್ಷೆ ಪ್ರತಿಧ್ವನಿಸುವ ಸಾಧ್ಯತೆಯಿದೆ. ಅಂತರಾಷ್ಟ್ರೀಯ ನಿಯಮ ಉಲ್ಲಂಘಿಸಿ ಉತ್ತರ ಕೊರಿಯಾ ಹೈಡ್ರೋಜನ್ ಬಾಂಬ್ ಪರೀಕ್ಷೆ ನಡೆಸಿರೋದ್ರಿಂದ ಚರ್ಚೆಗೆ ಬರುವ ಸಾಧ್ಯತೆಯಿದೆ.

ಚೀನಾದಲ್ಲಿ ಮೂರು ದಿನಗಳ ಪ್ರವಾಸದಲ್ಲಿರುವ ಮೋದಿ ಮಯನ್ಮಾರ್​ಗೆ ಪ್ರವಾಸ ಬೆಳೆಸಲಿದ್ದಾರೆ. ಭಾರತದ ಸಹಕಾರಕ್ಕಾಗಿ ಮಯನ್ಮಾರ್​ ದೇಶ ಹಾತೊರೆಯುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಪ್ರವಾಸ ಪ್ರಾಮುಖ್ಯತೆ ಪಡೆದುಕೊಂಡಿದೆ. ಎರಡು ದಿನಗಳ ಮಯನ್ಮಾರ್​ ಭೇಟಿಯಲ್ಲಿ ಉನ್ನತ ನಾಯಕರ ಜೊತೆ ಮೋದಿ ಚರ್ಚೆ ನಡೆಸಲಿದ್ದಾರೆ.

ಒಟ್ನಲ್ಲಿ ಡೋಕ್ಲಾಂ ಪ್ರಸ್ಥಭೂಮಿಯಲ್ಲಿ 73 ದಿನಗಳ ಸೇನಾ ಸಂಘರ್ಷ ಅಂತ್ಯಗೊಳಿಸಲು ಭಾರತ-ಚೀನಾ ಮಹತ್ವದ ನಿರ್ಧಾರ ಕೈಗೊಂಡ ಬೆನ್ನಲ್ಲೇ ಮೋದಿ ಚೀನಾ ಭೇಟಿ ಕುತೂಹಲ ಕೆರಳಿಸಿದೆ. ಈ ಮೂಲಕವಾದ್ರೂ ಭಯೋತ್ಪಾದಕ ಕೃತ್ಯಕ್ಕೆ ತಿಲಾಂಜಲಿಯಾಗುತ್ತಾ? ಎರಡೂ ದೇಶಗಳ ನಡುವೆ ಬಾಂಧವ್ಯ ಬೆಸೆದುಕೊಳ್ಳುತ್ತಾ? ಕಾದುನೋಡಬೇಕಿದೆ.