ಪಶುಗಳ ಸಗಣಿಯನ್ನು ಬಳಸಿ ಇಂಧನ ಉತ್ಪಾದಿಸುವ ‘ಗೋಬರ್‌-ಧನ್‌’ ಯೋಜನೆಯನ್ನು ಬರುವ ಏಪ್ರಿಲ್‌ನಿಂದ ಜಾರಿಗೊಳಿಸಲು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯ ಮುಂದಾಗಿದೆ.

ನವದೆಹಲಿ : ಪಶುಗಳ ಸಗಣಿಯನ್ನು ಬಳಸಿ ಇಂಧನ ಉತ್ಪಾದಿಸುವ ‘ಗೋಬರ್‌-ಧನ್‌’ ಯೋಜನೆಯನ್ನು ಬರುವ ಏಪ್ರಿಲ್‌ನಿಂದ ಜಾರಿಗೊಳಿಸಲು ಕೇಂದ್ರ ಕುಡಿಯುವ ನೀರು ಹಾಗೂ ನೈರ್ಮಲ್ಯ ಸಚಿವಾಲಯ ಮುಂದಾಗಿದೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಯೋಜನೆಯನ್ನು ಗ್ರಾಮೀಣ ಭಾಗದಲ್ಲಿ ಚುರುಕುಗೊಳಿಸಿದಂತೆ ಆಗುತ್ತದೆ ಹಾಗೂ ಇಂಧನ ಕ್ಷೇತ್ರದಲ್ಲಿ ಕ್ಷಮತೆ, ರೈತರಿಗೆ ಲಾಭ ತಲುಪಿಸಿದಂತೆಯೂ ಆಗುತ್ತದೆ ಎಂಬ ಯೋಚನೆ ಸರ್ಕಾರದ್ದಾಗಿದೆ.

ದೇಶದ 350 ಜಿಲ್ಲೆಗಳಲ್ಲಿ ಮೊದಲ ಹಂತದಲ್ಲಿ ಯೋಜನೆ ಆರಂಭಿಸುವ ಗುರಿ ಹಾಕಿಕೊಳ್ಳಲಾಗಿದೆ. ದೇಶದಲ್ಲಿ ಸುಮಾರು 30 ಕೋಟಿ ಪಶುಗಳ ಸಂಖ್ಯೆ ಇದ್ದು, ದಿನಕ್ಕೆ 30 ಲಕ್ಷ ಟನ್‌ ಸಗಣಿ ಸೃಷ್ಟಿಯಾಗುತ್ತದೆ. ಈ ಸಗಣಿಯನ್ನು ಬಳಸಿ ಜೈವಿಕ ಅನಿಲ ಹಾಗೂ ಜೈವಿಕ ಸಿಎನ್‌ಜಿ ಉತ್ಪಾದಿಸುವುದು ಮತ್ತು ಅದನ್ನು ಇ-ಕಾಮರ್ಸ್‌ ವೇದಿಕೆಯ ಮೂಲಕ ಆನ್‌ಲೈನ್‌ನಲ್ಲೇ ಮಾರಾಟ ಮಾಡುವುದು- ಯೋಜನೆಯ ಮುಖ್ಯ ಭಾಗವಾಗಿದೆ. ಸಾರ್ವಜನಿಕ ಸ್ವಾಮ್ಯದ ಬೃಹತ್‌ ತೈಲ ಕಂಪನಿಯೊಂದು ಈ ಜೈವಿಕ ಅನಿಲ ಖರೀದಿಗೂ ಮುಂದೆ ಬಂದಿದೆ ಎಂದು ಮೂಲಗಳು ಹೇಳಿವೆ.

ಗ್ರಾಮ ಪಂಚಾಯ್ತಿಯು ಯೋಜನೆಯ ಕೇಂದ್ರವಾಗಲಿದೆ. ಆಸಕ್ತ ಗ್ರಾಮೀಣರು ಬಯೋ ಗ್ಯಾಸ್‌ ಮತ್ತು ಬಯೋ ಸಿಎನ್‌ಜಿ ಘಟಕಗಳನ್ನು ಸ್ಥಾಪಿಸಬಹುದಾಗಿದೆ. ಎಲ್ಲಿ ಘಟಕ ಸ್ಥಾಪಿಸಬೇಕು, ಯಾವ ತಂತ್ರಜ್ಞಾನ ಎಂಬುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇಲ್ಲಿ ಉತ್ಪಾದನೆಯಾದ ಜೈವಿಕ ಅನಿಲವನ್ನು ಆನ್‌ಲೈನ್‌ನಲ್ಲಿ ಕಂಪನಿಗಳನ್ನು ಸಂಪರ್ಕಿಸಿ ಮಾರಾಟ ಮಾಡಲು ಕೇಂದ್ರ ಸರ್ಕಾರವೇ ನೆರವು ನೀಡಲಿದೆ ಎಂದು ಮೂಲಗಳು ತಿಳಿಸಿವೆ.

ಏನೇನು ಲಾಭ?

ಸಗಣಿ ಸೂಕ್ತ ಬಳಕೆಯಿಂದ ಕೃಷಿಗೆ ಉತ್ತಮ ಕಾಂಪೋಸ್ಟ್‌ ಗೊಬ್ಬರ ಲಭ್ಯ

ಗ್ರಾಮ ಆಧರಿತ ಈ ಯೋಜನೆ ಜಾರಿಗಾಗಿ ಮೂಲಸೌಕರ್ಯ ಅಭಿವೃದ್ಧಿ

ಬಯೋಗ್ಯಾಸ್‌ ಜೊತೆಗೆ, ಇದರಿಂದ ವಿದ್ಯುತ್‌ ಉತ್ಪಾದನೆಗೂ ಆದ್ಯತೆ

ಇಡೀ ಯೋಜನೆಯಿಂದ ಗ್ರಾಮಗಳಲ್ಲಿ ಹೆಚ್ಚಿನ ಸ್ವಚ್ಛತೆ ಸಾಧ್ಯವಾಗುತ್ತದೆ