ಬೆಂಗಳೂರು (ಮಾ. 05):  ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರ ಮತಗಳು ಬೇಕಿಲ್ಲವಂತೆ. ಹೀಗಾಗಿ ಅಲ್ಪಸಂಖ್ಯಾತರೆಲ್ಲರೂ ಶೇ.100ರಷ್ಟುಮತಗಳನ್ನು ಕಾಂಗ್ರೆಸ್‌ ಪಕ್ಷಕ್ಕೇ ಹಾಕಬೇಕು. ಈ ಮೂಲಕ ನಮ್ಮನ್ನು ವಿರೋಧಿಸುವ ಬಿಜೆಪಿಗೆ ತಕ್ಕ ಉತ್ತರ ನೀಡಬೇಕು ಎಂದು ಸಚಿವ ಜಮೀರ್‌ ಅಹ್ಮದ್‌ ಖಾನ್‌ ಅಲ್ಪಸಂಖ್ಯಾತರಿಗೆ ಕರೆ ನೀಡಿದ್ದಾರೆ.

ಲೋಕಸಭೆ ಚುನಾವಣೆ: ಮೌನವಾಗುತ್ತಾ ಟ್ವಿಟರ್?

ರಾಜ್ಯ ಕಾಂಗ್ರೆಸ್‌ ಅಲ್ಪಸಂಖ್ಯಾತರ ಘಟಕದಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಐಕ್ಯತಾ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವ ಮೊದಲು ನೀಡಿದ್ದ ಯಾವೊಂದು ಆಶ್ವಾಸನೆಯನ್ನೂ ಈಡೇರಿಸಿಲ್ಲ. ಕಪ್ಪು ಹಣ ನಿಯಂತ್ರಿಸುತ್ತೇನೆ. ಪ್ರತಿ ವರ್ಷ 1 ಕೋಟಿ ಉದ್ಯೋಗ ಸೃಷ್ಟಿಸುತ್ತೇನೆ ಎಂದೆಲ್ಲಾ ಹೇಳಿದ್ದರು. ಆದರೆ, ಕಳೆದ ನಾಲ್ಕೂವರೆ ವರ್ಷ ಕೇವಲ ಸುಳ್ಳು ಹೇಳುವುದರಲ್ಲೇ ಕಾಲ ಕಳೆದಿದ್ದಾರೆ. ಮನ್‌ ಕಿ ಬಾತ್‌ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಅದೂ ಅಲ್ಲದೆ ಅವರಿಗೆ ಮುಸ್ಲಿಂ ಹಾಗೂ ಕ್ರಿಶ್ಚಿಯನ್ನರು ಬೇಕಿಲ್ಲವಂತೆ. ಹೀಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಬಿಜೆಪಿ ಹಾಗೂ ಕಾಂಗ್ರೆಸ್‌ ಸಿದ್ಧಾಂತಗಳು ತದ್ವಿರುದ್ಧವಾದವು. ಕಾಂಗ್ರೆಸ್‌ ಪಕ್ಷವು ಎಲ್ಲರನ್ನೂ ಸಮಾನವಾಗಿ ಕಾಣುತ್ತದೆ. ಅಲ್ಪಸಂಖ್ಯಾತರು, ದಲಿತರು ಸೇರಿ ಎಲ್ಲರಿಗೂ ಸಮಾನ ಅವಕಾಶ ನೀಡಿದೆ. ಹೀಗಾಗಿ ನೀವೆಲ್ಲರೂ ಕಾಂಗ್ರೆಸ್‌ ಪಕ್ಷವನ್ನು ಬೆಂಬಲಿಸಬೇಕು. ಶೇ.50ರಷ್ಟುಮತ, 75ರಷ್ಟುಮತ ನೀಡದೆ ಶೇ.100ಕ್ಕೆ 100ರಷ್ಟೂಮತ ಕಾಂಗ್ರೆಸ್‌ಗೆ ಮಾತ್ರವೇ ಹಾಕಬೇಕು. ಈ ಮೂಲಕ ಬಿಜೆಪಿಯವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಕರೆ ನೀಡಿದರು.

ಕಾಂಗ್ರೆಸ್‌ ಪಕ್ಷವೂ ಸಹ ಅಲ್ಪಸಂಖ್ಯಾತರಿಗೆ ಚುನಾವಣೆಯಲ್ಲಿ ಸೂಕ್ತ ಅವಕಾಶಗಳನ್ನು ನೀಡಬೇಕು. ಬೆಂಗಳೂರು ಕೇಂದ್ರ ಸೇರಿದಂತೆ ಎರಡು ಲೋಕಸಭೆ ಕ್ಷೇತ್ರಗಳನ್ನು ಅಲ್ಪಸಂಖ್ಯಾತರಿಗೆ ನೀಡಬೇಕು. ಈ ದಿಸೆಯಲ್ಲಿ ಸಿದ್ದರಾಮಯ್ಯ ಅವರು ಪ್ರಯತ್ನ ಮಾಡುತ್ತಾರೆ. ನಾವು ಕಾಂಗ್ರೆಸ್‌ ಬೆಂಬಲಿಸಲು ಮುಂದಾಗೋಣ ಎಂದರು.

ಉಗ್ರರ ಅಡ್ಡೆ ಬಗ್ಗೆ ಪಾಕ್‌ ಸುಳ್ಳಿಗೆ ಮತ್ತೊಂದು ಸಾಕ್ಷ್ಯ: ಸಕ್ರಿಯವಾಗಿದ್ದವು 300 ಮೊಬೈಲ್‌!

ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, ಮುಂದಿನ 15 ದಿನಗಳಲ್ಲಿ ಲೋಕಸಭೆ ಚುನಾವಣೆ ಘೋಷಣೆ ಆಗಲಿದೆ. ಈ ಚುನಾವಣೆ ದೇಶದ ಭವಿಷ್ಯ ರೂಪಿಸುವಲ್ಲಿ ಪ್ರಮುಖ ಚುನಾವಣೆ ಆಗಲಿದೆ. ಹೀಗಾಗಿ ಕಾಂಗ್ರೆಸ್‌ ಗೆಲ್ಲಿಸಿ ಬಿಜೆಪಿ ಸೋಲಿಸುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಕಳೆದ 5 ವರ್ಷದಲ್ಲಿ ಒಂದೂ ಭರವಸೆ ಈಡೇರಿಸಿಲ್ಲ. ಆದರೆ ಬಿಜೆಪಿ ತಾನು ನೀಡಿದ ಭರವಸೆಗಳನ್ನು ಈಡೇರಿಸುವುದಾಗಿ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದೆ. ಕಾಂಗ್ರೆಸ್‌ ಪಕ್ಷವು ದೇಶದ ಅಭಿವೃದ್ಧಿಗೆ ಅನೇಕ ಕೊಡುಗೆ ನೀಡಿದೆ. ದೇಶದಲ್ಲಿ ಭಯೋತ್ಪಾದನೆ ನಿರ್ಮೂಲನೆಗಾಗಿ ಕಾಂಗ್ರೆಸ್‌ ಶ್ರಮಿಸಿದೆ. ಕಾಂಗ್ರೆಸ್‌ ಅವಧಿಯಲ್ಲಿ ದೇಶ ವಿಕಾಸವಾಗಿದೆ. ಕಾಂಗ್ರೆಸ್‌ ಅವಧಿಯ ಯೋಜನೆಗಳನ್ನೇ ಹೆಸರು ಬದಲಿಸಿ ಜಾರಿಗೊಳಿಸಿ ನಮ್ಮ ಯೋಜನೆ ಎಂದು ಬಿಜೆಪಿ ಹೇಳುತ್ತಿದೆ ಎಂದು ಕಿಡಿ ಕಾರಿದರು.