ನವದೆಹಲಿ[ಮಾ.05]: ಭಾರತವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಾಕೋಟ್‌ನ ಜೈಷ್‌ ಎ ಮೊಹಮ್ಮದ್‌ ಭಯೋತ್ಪಾದಕ ನೆಲೆಯ ಮೇಲೆ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಮತ್ತೊಂದು ಪುರಾವೆ ಲಭಿಸಿದೆ. ದಾಳಿ ನಡೆದ ಸ್ಥಳದಲ್ಲಿ 300 ಮೊಬೈಲ್‌ ಫೋನ್‌ಗಳು ಸಕ್ರಿಯವಾಗಿದ್ದವು. ಇದನ್ನು ಆಧರಿಸಿಯೇ ದಾಳಿ ನಡೆದಿದೆ ಎಂಬ ಖಚಿತ ಮಾಹಿತಿ ಬೆಳಕಿಗೆ ಬಂದಿದೆ. ಇದರೊಂದಿಗೆ ದಾಳಿಯಲ್ಲಿ ಯಾರೂ ಸತ್ತಿಲ್ಲ ಎಂಬ ಪಾಕಿಸ್ತಾನದ ಮೊಂಡುವಾದ ಸುಳ್ಳೆಂದು ಸಾಬೀತಾಗಿದ್ದು, ನೆರೆ ದೇಶಕ್ಕೆ ಮತ್ತೆ ಮುಖಭಂಗವಾಗಿದೆ.

ಇತ್ತೀಚೆಗೆ ವಿದೇಶೀ ಪತ್ರಕರ್ತೆಯೊಬ್ಬರು ಸ್ಥಳೀಯ ಪ್ರತ್ಯಕ್ಷದರ್ಶಿಗಳನ್ನು ಉಲ್ಲೇಖಿಸಿ, ಬಾಲಾಕೋಟ್‌ನಲ್ಲಿ 35 ಶವಗಳನ್ನು ಪಾಕ್‌ ಸೇನೆ ರವಾನಿಸಿದ ಬಗ್ಗೆ ವರದಿ ಮಾಡಿದ್ದರು. ಇದರ ಬೆನ್ನಲ್ಲೇ ಜೈಷೆ ಉಗ್ರ ನಾಯಕ ಮೌಲಾನಾ ಮಸೂದ್‌ ಅಜರ್‌ನ ಸೋದರ ಮೌಲಾನಾ ಅಮ್ಮಾರ್‌ ಆಡಿಯೋ ಸಂದೇಶವೊಂದರಲ್ಲಿ, ಭಾರತೀಯ ಯೋಧರು ತಮ್ಮ ಮೇಲೆ ದಾಳಿ ನಡೆಸಿದ್ದನ್ನು ಒಪ್ಪಿಕೊಂಡಿದ್ದ. ಇದೀಗ ಭಾರತದ ದಾಳಿಯ ಬಗ್ಗೆ ಮೂರನೇ ಪುರಾವೆ ಲಭಿಸಿದೆ.

300 ಮೊಬೈಲ್‌ಗಳು ಸಕ್ರಿಯ:

ಬಾಲಾಕೋಟ್‌ನಲ್ಲಿನ ಜೈಷ್‌ ಎ ಮೊಹಮ್ಮದ್‌ ಉಗ್ರರ ಶಿಬಿರದ ಮೇಲೆ ದಾಳಿ ಮಾಡುವ ಮುನ್ನ ಭಾರತೀಯ ವಾಯುಪಡೆಗೆ ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ (ಎನ್‌ಟಿಆರ್‌ಒ) ಖಚಿತ ಸುಳಿವೊಂದನ್ನು ನೀಡಿತ್ತು. ದಾಳಿ ನಡೆಸಬೇಕಾದ ಸ್ಥಳದಲ್ಲಿ 300 ಮೊಬೈಲ್‌ ಫೋನ್‌ಗಳು ಸಕ್ರಿಯವಾಗಿವೆ ಎಂದು ಅದು ವಾಯುಪಡೆಗೆ ತಿಳಿಸಿತ್ತು ಎಂಬ ವಿಷಯ ಗೊತ್ತಾಗಿದೆ.

ಇದರಿಂದಾಗಿ ಬಾಲಾಕೋಟ್‌ ಶಿಬಿರದಲ್ಲಿ ಸುಮಾರು 300ರ ಆಸುಪಾಸಿನ ಉಗ್ರರು ಇದ್ದರು ಹಾಗೂ ಅವರು ದಾಳಿಯಲ್ಲಿ ಸತ್ತಿದ್ದಾರೆ ಎಂಬುದು ತಿಳಿದುಬರುತ್ತದೆ ಎಂದು ಮೂಲಗಳು ಹೇಳಿವೆ.

ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಅವರ ಅಧೀನದಲ್ಲಿ ಎನ್‌ಟಿಆರ್‌ಒ ಕೆಲಸ ಮಾಡುತ್ತದೆ. ಬಾಲಾಕೋಟ್‌ನಲ್ಲಿ ಉಗ್ರರ ಶಿಬಿರ ಇರುವ ಬಗ್ಗೆ ದೊರೆತ ಗುಪ್ತಚರ ಮಾಹಿತಿ ಆಧರಿಸಿ ದಾಳಿ ನಡೆಸಲು ವಾಯುಪಡೆಗೆ ಸರ್ಕಾರ ಅನುಮತಿ ನೀಡಿತ್ತು. ಇದಾದ ನಂತರ ಉಗ್ರರ ಇರುವಿಕೆ ಬಗ್ಗೆ ಮತ್ತೊಮ್ಮೆ ಖಚಿತಪಡಿಸಿಕೊಳ್ಳಲು ಎನ್‌ಟಿಆರ್‌ಒ ಕೂಡ ಈ ನೆಲೆಗಳ ಮೇಲೆ ನಿರಂತರವಾಗಿ ಕಣ್ಣಿಟ್ಟಿತ್ತು. ಆಗ 300 ಮೊಬೈಲ್‌ ಫೋನುಗಳು ಬಾಲಾಕೋಟ್‌ ನೆಲೆಯಲ್ಲಿ ಸಕ್ರಿಯವಾಗಿವೆ ಎಂಬ ಖಚಿತ ಮಾಹಿತಿಯನ್ನು ವಾಯುಪಡೆಗೆ ಅದು ನೀಡಿತ್ತು. ಈ ನಿಖರ ಮಾಹಿತಿ ಆಧರಿಸಿಯೇ ವಾಯುಪಡೆಯು ವೈಮಾನಿಕ ದಾಳಿ ನಡೆಸಿತು ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

ಭಾರತ ಸರ್ಕಾರ ಈವರೆಗೂ ಎಷ್ಟುಉಗ್ರರು ಸತ್ತಿದ್ದಾರೆ ಎಂಬ ಅಧಿಕೃತ ಅಂಕಿ-ಅಂಶ ನೀಡಿಲ್ಲವಾದರೂ 300 ಮೊಬೈಲ್‌ ಫೋನುಗಳ ಸಕ್ರಿಯತೆಯು ನೂರಾರು ಉಗ್ರರ ಸಾವನ್ನು ಖಚಿತಪಡಿಸುತ್ತದೆ ಎಂದು ಮೂಲಗಳು ಹೇಳಿವೆ.

ಏನಿದು ಎನ್‌ಟಿಆರ್‌ಒ?

ನ್ಯಾಷನಲ್‌ ಟೆಕ್ನಿಕಲ್‌ ರಿಸಚ್‌ರ್‍ ಆರ್ಗನೈಸೇಷನ್‌ (ರಾಷ್ಟ್ರೀಯ ತಾಂತ್ರಿಕ ಸಂಶೋಧನಾ ಸಂಸ್ಥೆ) ಹೆಸರಿನ ಇದೊಂದು ತಾಂತ್ರಿಕ ಗುಪ್ತಚರ ಸಂಸ್ಥೆ. ಇಂಟೆಲಿಜನ್ಸ್‌ ಬ್ಯೂರೋ, ರಿಸಚ್‌ರ್‍ ಆ್ಯಂಡ್‌ ಅನಾಲಿಸಿಸ್‌ ವಿಂಗ್‌ (ರಾ) ಸೇರಿದಂತೆ ದೇಶದ ಗುಪ್ತಚರ ಸಂಸ್ಥೆಗಳಿಗೆ ಅಗತ್ಯವಾದ ತಾಂತ್ರಿಕವಾದ ಗುಪ್ತಚರ ಮಾಹಿತಿಯನ್ನು ಇದು ನೀಡುತ್ತದೆ. ಜೊತೆಗೆ ವಿವಿಧ ಗುಪ್ತಚರ ಸಂಸ್ಥೆಗಳಿಗೆ ಅಗತ್ಯವಾದ ತಾಂತ್ರಿಕ ವ್ಯವಸ್ಥೆ ರೂಪಿಸಿಕೊಡುತ್ತದೆ. ಇದು ಪ್ರಧಾನಿ ಕಚೇರಿಯಡಿ ಕಾರ್ಯನಿರ್ವಹಿಸುವ ರಾಷ್ಟ್ರೀಯ ಭದ್ರತಾ ಸಲಹೆಗಾರರ ವ್ಯಾಪ್ತಿಗೆ ಬರುತ್ತದೆ.