ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿ ಸಾಮಾಜಿಕ ನೆಟ್ವರ್ಕಿಂಗ್ ಜಾಲತಾಣಗಳು ಪ್ರಮುಖ ಪಾತ್ರ ವಹಿಸುತ್ತವೆ. 
ಕಳೆದ ಲೋಕಸಭೆ ಚುನಾವಣೆ, ಬಳಿಕ ನಡೆದ ವಿಧಾನಸಭೆ ಚುನಾವಣೆಗಳಲ್ಲಿ ಸೋಶಿಯಲ್ ಮೀಡಿಯಾ ಹೇಗೇಗೆ ಬಳಕೆಯಾಗಿದೆ? ಯಾವ್ಯಾವ ರೀತಿಯಲ್ಲಿ ಜನಾಭಿಪ್ರಾಯ ರೂಪಿಸುತ್ತದೆ? ಎಂಬಿತ್ಯಾದಿ ವಿಚಾರಗಳನ್ನು ನಾವು ನೋಡಿದ್ದೇವೆ. ಜೊತೆಗೆ ಕಳೆದ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಸೋಶಿಯಲ್ ಮೀಡಿಯಾ ಪಾತ್ರ ವಿವಾದಕ್ಕೀಡಾಗಿದ್ದನ್ನು ಸ್ಮರಿಸಬಹುದು.

ಭಾರತದಲ್ಲೂ ಲೋಕಸಭೆ ಚುನಾವಣೆ ಸಮೀಪಿಸುತ್ತಿದೆ. ಲೋಕಸಭಾ ಚುನಾವಣೆವನ್ನು ಡಿಜಿಟಲ್ ಆಯಾಮದಿಂದಲೂ ಪಾರದರ್ಶಕವಾಗಿಸುವ ಬಗ್ಗೆ ಸರ್ಕಾರ ಸರ್ವ ಪ್ರಯತ್ನಗಳನ್ನು ನಡೆಸುತ್ತಿದೆ.

ಈ ನಿಟ್ಟಿನಲ್ಲಿ, ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಸೋಶಿಯಲ್ ನೆಟ್ವರ್ಕಿಂಗ್ ಸೈಟ್‌ಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರ ಸಿದ್ಧತೆ ನಡೆಸಿದೆ.

ಈ ಕುರಿತು ಈಗಾಗಲೇ ಟ್ವಿಟರ್ ಅಧಿಕಾರಿಗಳ ಜೊತೆ ಸಂಸದ ಅನುರಾಗ್ ಠಾಕೂರ್ ನೇತೃತ್ವದ ಸಂಸದೀಯ ಸಮಿತಿಯು ಸಭೆ ನಡೆಸಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನದ 48 ಗಂಟೆಗಳ ಮುಂಚೆ ಮೌನವಾಗುವಂತೆ ಟ್ವಿಟರ್‌ಗೆ ಸೂಚಿಸುವ ಬಗ್ಗೆ ಚರ್ಚೆ ನಡೆದಿದೆ.

ಮುಂಬರುವ ಚುನಾವಣೆ ಸಂದರ್ಭದಲ್ಲಿ ಚುನಾವಣಾ ಆಯೋಗದ ಜೊತೆಯಲ್ಲಿ ಸೇರಿ ಕೆಲಸ ಮಾಡುವಂತೆ ಟ್ವಿಟರ್‌ಗೆ ಹೇಳಲಾಗಿದೆ. ಇದಕ್ಕಾಗಿಯೇ, ನೋಡಲ್ ಅದಿಕಾರಿಯನ್ನು ನೇಮಿಸುವುದಾಗಿ ಟ್ವಿಟರ್ ಈ ಸಂದರ್ಭದಲ್ಲಿ ಹೇಳಿದೆ.

ಇದನ್ನೂ ಓದಿ: ನಿಯಮ ಉಲ್ಲಂಘನೆ: ಫೇಸ್ಬುಕ್ ರಿಸರ್ಚ್ ಆ್ಯಪ್‌ಗೆ ನಿಷೇಧ

ಸರ್ಕಾರದ ಪ್ರಸ್ತಾಪಗಳಿಗೆ ಪ್ರತಿಕ್ರಿಯಿಸುವಂತೆ ಟ್ವಿಟರ್‌ಗೆ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಮಾ.06ರಂದು ಇದೇ ಸಮಿತಿಯು ಫೇಸ್ಬುಕ್ ಮತ್ತು ವಾಟ್ಸಪ್ ಕಂಪನಿ ಅಧಿಕಾರಿಗಳ ಜೊತೆಯೂ ಸಭೆ ನಡೆಸಲಿದೆ. 

ಇಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಗೂ ಪತ್ರ ಬರೆದಿರುವ ಅನುರಾಗ್ ಠಾಕೂರ್ ನೇತೃತ್ವದ ಸಮಿತಿಯು, ಕೆಲವು ಪ್ರಶ್ನೆಗಳನ್ನು ಕೇಳಿದೆ.

ಸೋಶಿಯಲ್ ಮೀಡಿಯಾವನ್ನು ನಿಯಂತ್ರಿಸಬಹುದೇ? ಇಲ್ಲವೇ? ಹೌದೆಂದಾದಲ್ಲಿ, ಯಾರು ನಿಯಂತ್ರಿಸಬೇಕು? ಕಂಪನಿಗಳ ಕಾರ್ಯಾಚರಣೆ ಮತ್ತು ಸುರಕ್ಷತೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕು? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಲಾಗಿದೆ.