ಜೈಪುರ(ಮೇ.15): ತಮ್ಮ ರಕ್ಷಣೆಗಿರುವ ಪೊಲೀಸರಿಗೆ ಪ್ರತ್ಯೇಕ ವಾಹನ ನೀಡುವಂತೆ ಆಗ್ರಹಿಸಿ, ಪ್ರಧಾನಿ ನರೇಂದ್ರ ಮೋದಿ ಸಹೋದರ ಪ್ರಹ್ಲಾದ್ ಮೋದಿ ಪೊಲೀಸ್ ಠಾಣೆಯ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಜೈಪುರದಿಂದ ತೆರಳುತ್ತಿದ್ದ ಪ್ರಹ್ಲಾದ್ ಮೋದಿ ಅವರ ರಕ್ಷಣೆಗಾಗಿ ಇಬ್ಬರು ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೆ ಅವರಿಗೆ ಪ್ರತ್ಯೇಕ ವಾಹನ ವ್ಯವಸ್ಥೆ ಮಾಡದೇ, ಪ್ರಹ್ಲಾದ್ ಮೋದಿ ಅವರ ವಾಹನದಲ್ಲೇ ಕಳುಹಿಸಿ ಕೊಡುವ ವ್ಯವಸ್ಥೆ ಮಾಡಲಾಗಿತ್ತು.

ಇದರಿಂದ ಕೆರಳಿದ ಪ್ರಹ್ಲಾದ್ ಮೋದಿ, ಬೆಂಗಾವಲು ವಾಹನ ನೀಡುವಂತೆ ಬಾಗ್ರು ಪೊಲೀಸ್ ಠಾಣೆ ಎದುರಲ್ಲಿ ಧರಣಿ ನಡೆಸಿದರು. ಬಳಿಕ ನಿಯಮದಂತೆ ಇಬ್ಬರು ಭದ್ರತಾ ಸಿಬ್ಬಂದಿಯನ್ನು ವಿಐಪಿ ಕಾರಿನಲ್ಲೇ ಕಳುಹಿಸಬೇಕಾದ ಅನಿವಾರ್ಯತೆನ್ನು ಜೈಪುರ್ ಪೊಲೀಸ್ ಕಮಿಷನರ್ ಆನಂದ್ ಶ್ರೀವಾತ್ಸವ್ ಮನವರಿಕೆ ಮಾಡಿಕೊಟ್ಟಿದ್ದಾರೆ.

ಪೊಲೀಸ್ ಕಮಿಷನರ್ ಭರವಸೆ ಬಳಿಕ ಧರಣಿ ಕೈಬಿಟ್ಟ ಪ್ರಹ್ಲಾದ್ ಮೋದಿ ಬಳಿಕ ಇಬ್ಬರು ಭದ್ರತಾ ಸಿಬ್ಬಂದಿಯೊಂದಿಗೆ ತಮ್ಮದೇ ಕಾರಿನಲ್ಲಿ ತೆರಳಿದರು.