ಟೊಕಿಯೋ(ಜೂ.27): ಭಾರತ ಇಂದು ವಿಶ್ವ ಭೂಪಟದಲ್ಲಿ ರಾರಾಜಿಸಲು ಅನಿವಾಸಿ ಭಾರತೀಯರ ಕೊಡುಗೆ ಅಪಾರ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಜಪಾನ್’ನ ಟೊಕಿಯೋಗೆ ಬಂದಿಳಿದಿರುವ ಪ್ರಧಾನಿ ಮೋದಿ, ಅನಿವಾಸಿ ಭಾರತೀಯರನ್ನುದ್ದೇಶಿಸಿ ಮಾತನಾಡಿದರು. ವಿಶ್ವಕ್ಕೆ ಭಾರತದ ವಿದ್ವತ್ತಿನ ಪರಿಚಯ ಮಾಡಿಸಿದ ಕೀರ್ತಿ ಅನಿವಾಸಿ ಭಾರತೀಯರಿಗೆ ಸಲ್ಲಬೇಕು ಎಂದು ಮೋದಿ ಹೇಳಿದರು.

ಪ್ರಧಾನಿಯಾಗಿ ತಾವು ಇದುವರೆಗೂ ಒಟ್ಟು ನಾಲ್ಕು ಬಾರಿ ಜಪಾನ್’ಗೆ ಭೇಟಿ ನೀಡಿದ್ದು, ಪ್ರತಿ ಬಾರಿಯೂ ತಮಗೆ ಇಲ್ಲಿನ ಜನತೆ ಅಭೂತಪೂರ್ವ ಸ್ವಾಗತ ನೀಡಿದ್ದಾರೆ. ಜಪಾನೀಯರ ಕರ್ತವ್ಯ ನಿಷ್ಠೆ, ಅವಿರತ ದುಡಿಮೆ ಇಡೀ ವಿಶ್ವಕ್ಕೆ ಮಾದರಿ ಎಂದು ಈ ವೇಳೆ ಪ್ರಧಾನಿ ಕೊಂಡಾಡಿದರು.

ಭಾರತದಲ್ಲಿ ಸತತ ಎರಡನೇ ಬಾರಿಗೆ ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ನವಭಾರತದ ನಿರ್ಮಾಣ ಇದೀಗ ಮತ್ತಷ್ಟು ವೇಗ ಪಡೆದುಕೊಂಡಿದೆ. ಈ ಕಾರ್ಯದಲ್ಲಿ ಅನಿವಾಸಿ ಭಾರತೀಯರು ಕೈಜೋಡಿಸಬೇಕು ಎಂದು ಈ ವೇಳೆ ಮೋದಿ ಮನವಿ ಮಾಡಿದರು.

ವಿದೇಶಗಳೊಂದಿಗೆ ಭಾರತದ ಸಂಬಂಧ ವೃದ್ಧಿಯಲ್ಲಿ ಅನಿವಾಸಿ ಭಾರತೀಯರು ಅಪಾರ ಕೊಡುಗೆ ನೀಡುತ್ತಿದ್ದು, ನಿಮ್ಮ ಪ್ರಾಮಾಣಿಕತೆ ಭಾರತದ ನಿಜವಾದ ಆಸ್ತಿಯಾಗಿದೆ ಎಂದು ಪ್ರಧಾನಿ ಈ ವೇಳೆ ಅನಿವಾಸಿ ಭಾರತೀಯರ ಕೊಡುಗೆಯನ್ನು ಸ್ಮರಿಸಿದರು.

ಪ್ರಧಾನಿ ಮೋದಿ ಭಾಷಣದ ಬಳಿಕ ಸಭಾಂಗಣದಲ್ಲಿ ವಂದೇ ಮಾತರಂ, ಜೈ ಶ್ರೀರಾಮ್ ಘೋಷಣೆಗಳು ಮೊಳಗಿದ್ದು ವಿಶೇಷವಾಗಿತ್ತು.