ಸಿರ್ಸಾ(ಅ.19): ಏಳು ದಶಕಗಳಿಂದ ಪಾಕಿಸ್ತಾನದ ಕರ್ತರ್'ಪುರ್ ಸಾಹಿಬ್ ಗುರುದ್ವಾರದೊಂದಿಗೆ ಭಾರತವನ್ನು ಸಂಪರ್ಕಿಸುವ ಕಾರಿಡಾರ್ ನಿರ್ಮಿಸಲು ಯಾವುದೇ ಪ್ರಯತ್ನವನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ನಡೆಸಲಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ.

ಹರಿಯಾಣದ ಸಿರ್ಸಾ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಅಂತರರಾಷ್ಟ್ರೀಯ ಗಡಿಯಿಂದ ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿರುವ ಪವಿತ್ರ ಕರ್ತಾರ್‌ಪುರ್ ಸಾಹಿಬ್ ಗುರುದ್ವಾರವನ್ನು ನೆರೆಯ ಪಾಕಿಸ್ತಾನಕ್ಕೆ ಬಿಟ್ಟುಕೊಟ್ಟಿದ್ದು ದೇಶ ವಿಭಜನೆಯ ವೇಳೆ ಮಾಡಿದ ಮಹಾ ಪ್ರಮಾದ ಎಂದು ಹರಿಹಾಯ್ದರು.

70 ವರ್ಷಗಳಿಂದ ನಿರ್ಮಿಸಲು ಸಾಧ್ಯವಾಗದಿದ್ದ ಈ ಕಾರಿಡಾರ್ ಮುಂದಿನ ತಿಂಗಳು ಉದ್ಘಾಟನೆಗೊಳ್ಳುತ್ತಿದ್ದು, ಇದರಿಂದ ಪವಿತ್ರ ಕರ್ತಾರ್'ಪುರ್ ಸಾಹಿಬ್ ಗುರುದ್ವಾರದ ಯಾತ್ರೆ ಕೈಗೊಳ್ಳುವ ಸಿಖ್ ಭಕ್ತಾದಿಗಳಿಗೆ ಅನುಕೂಲವಾಗಲಿದೆ ಎಂದು ಮೋದಿ ನುಡಿದರು.

ಕಳೆದ ಏಳು ದಶಕಗಳಿಂದ ಬೈನಾಕ್ಯುಲರ್ ಮೂಲಕ ಪವಿತ್ರ ಕರ್ತಾರ್ ಪುರ್ ಗುರುದ್ವಾರ ಸಾಹಿಬ್ ನೋಡುವ ಪರಿಸ್ಥಿತಿಗಿಂತ ಭೀಕರ ಪರಿಸ್ಥಿತಿ ಜಗತ್ತಿನಲ್ಲಿ ಇನ್ಯಾವುದಿದೆ ಎಂದು ಮೋದಿ ಈ ಹಿಂದಿನ ಸರರ್ಕಾರಗಳ ನಿರ್ಲಕ್ಷ್ಯವನ್ನು ಟೀಕಿಸಿದರು.

1947ರಲ್ಲಿ ದೇಶ ವಿಭಜನೆಯ ವೇಳೆ ಗಡಿ ನಿಗಧಿಪಡಿಸಿದವರು ಈ ಪ್ರಮಾದಕ್ಕೆ ಕಾರಣ ಎಂದ ಪ್ರಧಾನಿ, ಗುರುಗಳು ಹಾಗೂ ಭಕ್ತರನ್ನು ಕೇವಲ ನಾಲ್ಕು ಕಿಲೋಮೀಟರ್ ದೂರದಲ್ಲಿ ವಿಭಜಿಸುತ್ತಿದ್ದೇವೆ ಎಂಬ ಸಾಮಾನ್ಯ ಜ್ಞಾನ ಕೂಡ ಅವರಿಗಿರಲಿಲ್ಲ ಎಂದು ಕಿಡಕಾರಿದರು.

ಕಾಂಗ್ರೆಸ್ ದೇಶದ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಎಂದೂ ಗೌರವಿಸಿಲ್ಲ ಎಂದು ಆರೋಪಿಸಿದ ಮೋದಿ, ಪೂಜಾ ಸ್ಥಳಗಳ ವಿಷಯದಲ್ಲಿ ಅನುಸರಿಸಿದ ಧೋರಣೆಯನ್ನೇ ಜಮ್ಮು ಮತ್ತು ಕಾಶ್ಮೀರದಲ್ಲಿ ಅನುಸರಿಸಿ, ಕಾಶ್ಮೀರ ಸಮಸ್ಯೆಯನ್ನು ಮತ್ತಷ್ಟು ಜಟಿಲಗೊಳಿಸಿತು ಎಂದು ಕಾಂಗ್ರೆಸ್ ವಿರುದ್ಧ ಗಂಭೀರ ಆರೋಪ ಮಾಡಿದರು.