Asianet Suvarna News Asianet Suvarna News

ಕಾಂಗ್ರೆಸ್ ಕೈ ತಪ್ಪಲಿದೆಯಾ ಈ ಹುದ್ದೆ..?

ಕಾಂಗ್ರೆಸ್ ಪಕ್ಷವು ನಿರ್ವಹಿಸಿಕೊಂಡು  ಬಂದ ಈ ಹುದ್ದೆಯು ಕೈ ತಪ್ಪುವ ಸಾಧ್ಯತೆ ಇದ್ದು, ಕಾಂಗ್ರೆಸೇತರರ ಪಾಲಾಗುವ ಸಾಧ್ಯತೆ ಇದೆ. ಪಿ.ಜೆ. ಕುರಿಯನ್‌ ಅವರ ನಿವೃತ್ತಿಯಿಂದ ತೆರವಾಗುತ್ತಿರುವ ರಾಜ್ಯಸಭೆ ಉಪಸಭಾಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರತಿಪಕ್ಷಗಳು ಇದೇ ವಾರ ಸಭೆ ಸೇರುವ ಸಾಧ್ಯತೆ ಇದೆ.

PJ Kurien set to retire next month

ನವದೆಹಲಿ: ಪಿ.ಜೆ. ಕುರಿಯನ್‌ ಅವರ ನಿವೃತ್ತಿಯಿಂದ ತೆರವಾಗುತ್ತಿರುವ ರಾಜ್ಯಸಭೆ ಉಪಸಭಾಪತಿ ಹುದ್ದೆಗೆ ಒಮ್ಮತದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಪ್ರತಿಪಕ್ಷಗಳು ಇದೇ ವಾರ ಸಭೆ ಸೇರುವ ಸಾಧ್ಯತೆ ಇದೆ.

ಸದ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸುತ್ತಿದ್ದರೆ, ಈ ಬಾರಿ ಕಾಂಗ್ರೆಸ್ಸೇತರ ವ್ಯಕ್ತಿಯೊಬ್ಬರು ಉಪಸಭಾಪತಿಯಾಗುವ ಲಕ್ಷಣಗಳು ಕಂಡುಬರುತ್ತಿವೆ. ಹೀಗಾದಲ್ಲಿ 41 ವರ್ಷದ ಬಳಿಕ ಕಾಂಗ್ರೆಸ್ಸಿಗೆ ಉಪಸಭಾಪತಿ ಸ್ಥಾನ ತಪ್ಪಲಿದೆ. ಸ್ಪೀಕರ್‌, ಉಪಸ್ಪೀಕರ್‌, ಸಭಾಪತಿ ಹಾಗೂ ಉಪಸಭಾಪತಿಯಂತಹ ಎಲ್ಲ ನಾಲ್ಕೂ ಪ್ರಮುಖ ಹುದ್ದೆಗಳು ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ಕಾಂಗ್ರೆಸ್‌ನಿಂದ ವಂಚಿತವಾಗಲಿವೆ. 1977ರಿಂದಲೂ ಉಪಸಭಾಪತಿ ಸ್ಥಾನ ಕಾಂಗ್ರೆಸ್‌ ವಶದಲ್ಲಿದೆ.

ವಿವಿಧ ಪಕ್ಷಗಳ ರಾಜ್ಯಸಭಾ ನಾಯಕರು ಶೀಘ್ರದಲ್ಲೇ ಭೇಟಿಯಾಗಿ, ಉಪಸಭಾಪತಿ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಕುರಿತು ಚರ್ಚಿಸಲಿದ್ದಾರೆ ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ ಯೆಚೂರಿ ತಿಳಿಸಿದ್ದಾರೆ.

ಪಿ.ಜೆ. ಕುರಿಯನ್‌ ಅವರು ಜು.2ರ ಸೋಮವಾರ ನಿವೃತ್ತರಾಗುತ್ತಿದ್ದಾರೆ. ಆದರೆ, ಅವರ ಸ್ಥಾನಕ್ಕೆ ಮತ್ತೊಬ್ಬರನ್ನು ಆಯ್ಕೆ ಮಾಡಲು ಜು.18ರಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದವರೆಗೆ ಕಾಯಬೇಕಾಗುತ್ತದೆ. ಇದಕ್ಕೂ ಮುನ್ನವೇ ಒಮ್ಮತದ ಅಭ್ಯರ್ಥಿ ಆಯ್ಕೆ ಮಾಡುವ ಕುರಿತು ಪ್ರತಿಪಕ್ಷ ಪಾಳೆಯದಲ್ಲಿ ಮಾತುಕತೆ ಆರಂಭವಾಗಿದೆಯಾದರೂ, ಆ ಪಕ್ಷಗಳಲ್ಲಿ ಒಗ್ಗಟ್ಟು ಎಂಬುದು ಮರೀಚಿಕೆಯಾಗಿದೆ.

ಒಮ್ಮತದ ಅಭ್ಯರ್ಥಿಗೆ ತೃಣಮೂಲ ಕಾಂಗ್ರೆಸ್ಸಿಗೆ ಸಹಮತವಿದೆ. ಆದರೆ ಕಾಂಗ್ರೆಸ್ಸಿನ ಅಭ್ಯರ್ಥಿಯನ್ನು ಬೆಂಬಲಿಸಲು ಆ ಪಕ್ಷ ಹಿಂಜರಿಯುತ್ತಿದೆ. ಬಿಜೆಡಿ, ಟಿಡಿಪಿ, ಟಿಆರ್‌ಎಸ್‌ ನಿಲುವು ಕೂಡ ಇದೇ ಆಗಿದೆ. ಇನ್ನು ತೃಣಮೂಲ ಕಾಂಗ್ರೆಸ್ಸಿನ ಅಭ್ಯರ್ಥಿಯನ್ನು ಯಾವುದೇ ಕಾರಣಕ್ಕೂ ಬೆಂಬಲಿಸುವುದಿಲ್ಲ ಎಂದು ಸಿಪಿಎಂ ಹೇಳುತ್ತಿದೆ. ಹೀಗಾಗಿ ವಿಪಕ್ಷಗಳ ಸಭೆ ಕುತೂಹಲ ಮೂಡಿಸಿದೆ. ಉಪ ಸಭಾಪತಿ ಸ್ಥಾನಕ್ಕೆ ಹಿರಿಯ ಸಂಸದ ಸುಖೇಂದು ಶೇಖರ್‌ ರಾಯ್‌ ಹೆಸರನ್ನು ತೃಣಮೂಲ ಕಾಂಗ್ರೆಸ್‌ ಪ್ರಸ್ತಾಪಿಸುವ ಸೂಚನೆ ಕಂಡುಬರುತ್ತಿದೆ.

Follow Us:
Download App:
  • android
  • ios