ಬೆಂಗಳೂರು (ಡಿ.06):  420 ಎಂದು ಬರೆದಿರುವ ಫುಟ್ಬಾಲ್‌ ಜೆರ್ಸಿಯನ್ನು ಪ್ರಧಾನಿ ನರೇಂದ್ರ ಮೋದಿ ಉಡುಗೊರೆಯಾಗಿ ಪಡೆದಿದ್ದಾರೆ ಎಂಬ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ಈ ಫೋಟೋ ಭಾರಿ ವೈರಲ್‌ ಆಗುತ್ತಿದೆ. ‘ವಿ ಸಪೋರ್ಟ್‌ ಶೆಹ್ಲಾ ರಶೀದ್‌’ ಎಂಬ ಹೆಸರಿನ ಫೇಸ್‌ಬುಕ್‌ ಪೇಜ್‌ ಈ ಫೋಟೋವನ್ನು ಪೋಸ್ಟ್‌ ಮಾಡಿ, ‘ಭಾರತದ ಇತಿಹಾಸದಲ್ಲಿಯೇ ಪ್ರಧಾನಿಯೊಬ್ಬರಿಗೆ ಈ ರೀತಿ ಅವಮಾನವಾಗಿರಲಿಲ್ಲ. ಪೀಫಾ ಕೂಡ ಯಾರು ಹೇಗೆ ಎಂಬುದನ್ನು ಅರ್ಥ ಮಾಡಿಕೊಂಡಿದೆ’ ಎಂಬ ಒಕ್ಕಣೆ ಬರೆದು ಶೇರ್‌ ಮಾಡಿದ್ದಾರೆ.

ಹಲವರು ‘ಮೋದಿ420’ ಎಂದು ಹ್ಯಾಶ್‌ಟ್ಯಾಗ್‌ ಬರೆದು ಫೋಟೋವನ್ನು ಶೇರ್‌ ಮಾಡಿದ್ದಾರೆ. ಆದರೆ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಬೂಮ್‌ ಪರಿಶೀಲನೆ ನಡೆಸಿದಾಗ ಇದೊಂದು ಫೋಟೋಶಾಪ್‌ ಮಾಡಿದ ಚಿತ್ರ ಎಂಬುದು ಸ್ಪಷ್ಟವಾಗಿದೆ. ಈ ಬಗ್ಗೆ ಹಲವಾರು ಲೇಖನಗಳೂ ಪ್ರಕಟವಾಗಿದ್ದು, ಅದರಲ್ಲಿ ಪೀಫಾ ಅಧ್ಯಕ್ಷ ಗಿನ್ನಿ ಇನ್ಫಾನ್‌ಟಿನೋ ಅವರು ಪ್ರಧಾನಿ ನರೇಂದ್ರ ಮೋದಿ ಅವರೆ ಮೋದಿ ಜಿ-20 ಎಂದು ಬರೆದಿರುವ ಫುಟ್ಬಾಲ್‌ ಜೆರ್ಸಿಯನ್ನು ಉಡುಗೊರೆಯಾಗಿ ನೀಡಿದರು.

ನವೆಂಬರ್‌ 30 ಮತ್ತು ಡಿಸೆಂಬರ್‌ 1ರಂದು ನಡೆದ ಜಿ-20 ಸಮಾವೇಶದ ಬಳಿಕ ಮೋದಿ ಅರ್ಜೆಂಟೈನಾಕ್ಕೆ ಬೇಟಿ ನೀಡಿದ ಸಂದರ್ಭದಲ್ಲಿ ಈ ಉಡುಗೊರೆ ನೀಡಿದ್ದಾರೆ ಎಂದಿದೆ. ಇದಕ್ಕೂ ಮೊದಲು ನರೇಂದ್ರ ಮೋದಿ ಈ ಉಡುಗೊರೆ ನೀಡಿದ್ದಕ್ಕಾಗಿ ಧನ್ಯವಾದ ಹೇಳಿ ಟ್ವೀಟ್‌ ಮಾಡಿದ್ದರು. ಮೂಲ ಜೆರ್ಸಿಯಲ್ಲಿ ಜಿ-20 ಎಂದು ಬರೆಯಲಾಗಿದೆ. ಆದರೆ ಅದೇ ಚಿತ್ರವನ್ನು ಫೋಟೋಶಾಪ್‌ ಮೂಲಕ ಎಡಿಟ್‌ ಮಾಡಿ 420 ಎಂದು ಬರೆದು ಸುಳ್ಳುಸುದ್ದಿ ಹರಡಿದ್ದಾರೆ.

-ವೈರಲ್ ಚೆಕ್