Asianet Suvarna News Asianet Suvarna News

ದೇಶಪ್ರೇಮ ನಮಗೂ ಗೊತ್ತಿದೆ: ಪಿಎಫ್‌ಐ

ದೇಶಕ್ಕಾಗಿ ತ್ಯಾಗಕ್ಕೂ ನಾವು ಸಿದ್ಧ | ನಮಗೂ ಹೇಳಲಿಕ್ಕಿದೆ ಸಮಾವೇಶದಲ್ಲಿ ಕೂಗು | ಸಂಘಟನೆ ನಿಷೇಧಿಸಲು ಆರ್‌ಎಸ್‌ಎಸ್ ಹುನ್ನಾರ: ಆರೋಪ

PFI Holds We Also Have Something To Say Conference

ಬೆಂಗಳೂರು: ದೇಶ ಪ್ರೇಮ ಸಂಘ ಪರಿವಾರಕ್ಕೆ ಮಾತ್ರವಲ್ಲ ನಮಗೂ ಗೊತ್ತಿದ್ದು, ದೇಶಪ್ರೇಮದ ಮಡಿಲಲ್ಲೇ ಹುಟ್ಟಿ ಬಂದಿದ್ದೇವೆ. ದೇಶಕ್ಕಾಗಿ ಎಲ್ಲಾ ತ್ಯಾಗಕ್ಕೂ ನಾವು ಸದಾ ಸಿದ್ಧ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಆರ್‌ಎಸ್‌ಎಸ್‌ಗೆ (ರಾಷ್ಟ್ರೀಯ ಸ್ವಯಂಸೇವಕ ಸಂಘ) ತಿರುಗೇಟು ನೀಡಿದೆ. ನಗರದ ಅರಮನೆ ಮೈದಾನದಲ್ಲಿ ನಿರ್ಮಿಸಿದ್ದ ಗೌರಿ ಲಂಕೇಶ್ ವೇದಿಕೆಯಲ್ಲಿ ‘ನಮಗೂ ಹೇಳಲಿಕ್ಕಿದೆ’ ಘೋಷಣೆಯೊಂದಿಗೆ ಭಾನುವಾರ ನಡೆಸಿದ ಮಹಾಸಮಾವೇಶದಲ್ಲಿ ಪಿಎಫ್‌ಐ ಮುಖಂಡರು ಸೇರಿದಂತೆ ಪ್ರಗತಿಪರರು ಆರ್‌ಎಸ್‌ಎಸ್ ವಿರುದ್ಧ ಒಕ್ಕೊರಲ ಧ್ವನಿಮೊಳಗಿಸಿದರು.

ಪಿಎಫ್‌ಐ ಸಂಘಟನೆ ಕುರಿತು ಜನರಲ್ಲಿ ತಪ್ಪು ಗ್ರಹಿಕೆಯನ್ನು ವ್ಯವಸ್ಥಿತವಾಗಿ ಸೃಷ್ಟಿ ಮಾಡುವ ಕೆಲಸ ನಡೆಯುತ್ತಿದೆ. ಸಂಘಟನೆಯನ್ನು ಮುಗಿಸುವ ಸಂಚು ನಡೆಸಲಾಗುತ್ತಿದೆ. ದೇಶ ಪ್ರೇಮ ತಮಗೆ ಮಾತ್ರ ಇರುವಂತೆ ಸಂಘ ಪರಿವಾರ ಬಿಂಬಿಸಿಕೊಳ್ಳುತ್ತಿದೆ. ನಮಗೂ ದೇಶಪ್ರೇಮ ಗೊತ್ತಿದೆ. ದೇಶ ಪ್ರೇಮದ ಮಡಿಲಲ್ಲೇ ಹುಟ್ಟಿ ಬಂದಿದ್ದೇವೆ. ದೇಶದ ಭದ್ರತೆಗೆ ಎಂತಹ ತ್ಯಾಗಕ್ಕೂ ಸಿದ್ಧವಿರುತ್ತೇವೆ ಎಂದು ಆಕ್ರೋಶಭರಿತವಾಗಿ ಪಿಎಫ್‌ಐ ನಾಯಕರು ವಾಗ್ದಾಳಿ ನಡೆಸಿದರು.

ಪಿಎಫ್‌ಐ ರಾಷ್ಟ್ರೀಯ ಅಧ್ಯಕ್ಷ ಇ.ಅಬೂಬಕರ್ ಮಾತನಾಡಿ, ಸಂಘಟನೆ ವಿರುದ್ಧ ದೇಶದ್ರೋಹದ ಆರೋಪಗಳಿಲ್ಲ. ಅನಗತ್ಯವಾಗಿ ಸಂಘ ಪರಿವಾರವು ಸಂಘಟನೆ ನಿಷೇಧಿಸಲು ಸಂಚು ರೂಪಿಸಿದೆ. ಒಂದು ವೇಳೆ ಸಂಘಟನೆ ವಿರುದ್ಧ ಯಾವುದೇ ಆರೋಪಗಳು ಸಾಬೀತಾದರೆ ಕಾನೂನು ಕ್ರಮ ಕೈಗೊಳ್ಳಬಹುದು. ಅಲ್ಲದೇ, ಸಂಘಟನೆ ಕಾರ್ಯಕರ್ತರಿಗೆ ಗಲ್ಲು ಶಿಕ್ಷೆ ವಿಧಿಸಬಹುದು. ಯಾವುದೇ ಪ್ರಕರಣದಲ್ಲಿ ಸಂಘಟನೆ ವಿರುದ್ಧ ಸಾಕ್ಷಿಯೂ ಲಭ್ಯವಾಗಿಲ್ಲ. ಆದರೂ, ಪಿಎಫ್‌ಐ ನಿಷೇಧಿಸುವ ಮಾತು ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಸಾಮಾಜಿಕ- ಮಾನವ ಹಕ್ಕು ಸಂಘಟನೆಗಳ ಮೇಲೆ ಸುಳ್ಳು ಆರೋಪ ಹೊರಿಸಿ ದಮನಿಸುವ ಫ್ಯಾಸಿಸ್ಟ್ ಕೃತ್ಯವನ್ನು ಭಾರತದ ಇತಿಹಾಸದುದ್ದಕ್ಕೂ ನೋಡುತ್ತಿದ್ದೇವೆ. ಪಿಎಫ್‌ಐ ಸಂಘಟನೆಯನ್ನು ದಮನಿಸುವ ಕೆಲಸ ನಡೆಯುತ್ತಿದ್ದು, ಸಂಘ ಪರಿವಾರದ ಪ್ರಾಯೋಜಿತ ತನಿಖಾ ಸಂಸ್ಥೆಗಳು ಹೊರಿಸುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದುದು. ಉಗ್ರ ಸಂಘಟನೆಯಾದ ಐಸಿಸ್‌ಗೆ ದೇಶದ ಯುವಕರನ್ನು ಸೇರಿಸಲು ಸಂಘಟನೆಯಿಂದ ತರಬೇತಿ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ವಾಸ್ತವಾಂಶ ತಿಳಿಯದೆ ಮಾಡಲಾಗುತ್ತಿರುವ ಆರೋಪ ಇದಾಗಿದೆ ಎಂದು ಕಿಡಿಕಾರಿದರು.

ಪಿಎಫ್‌ಐನ ಮಾಜಿ ರಾಷ್ಟ್ರೀಯ ಅಧ್ಯಕ್ಷ ಕೆ.ಎಂ. ಷರೀಫ್ ಮಾತನಾಡಿ, ನಮ್ಮ ಸಂಘಟನೆಯನ್ನು ನಿಷೇಧಿಸುವಂತೆ ಸಂಘ ಪರಿವಾರದ ಸಂಘಟನೆಗಳು ಒತ್ತಾಯ ಮಾಡುತ್ತಿವೆ. ಆದರೆ, ನಾವು ಅವರ ಸಂಘಟನೆಗಳನ್ನು ನಿಷೇಧಿಸುವಂತೆ ಹೇಳುವುದಿಲ್ಲ. ಸಂಘ ಪರಿವಾರವನ್ನು ಸೈದ್ಧಾಂತಿಕವಾಗಿ ಎದುರಿಸುವ ಸಾಮರ್ಥ್ಯ ನಮ್ಮಲ್ಲಿದೆ. ಸೈದ್ಧಾಂತಿಕ ವಿಚಾರವಾಗಿಯೇ ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಮಾಡಲಾಗಿದೆ. ಆದರೆ ಅವರ ವಿಚಾರಧಾರೆಗಳು ಎಂದಿಗೂ ಮರೆಯಾಗುವುದಿಲ್ಲ ಎಂದು ಹೇಳಿದರು.

ಮೈಸೂರಿನ ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಮಾತನಾಡಿ, ಭಾರತವು ಸುಳ್ಳಿನ ಸಾಮ್ರಾಜ್ಯವಾಗಿದೆ. ಸತ್ಯ ಹೇಳಿದರೆ ಗುಂಡಿಕ್ಕಿ ಹತ್ಯೆ ಮಾಡಲಾಗುತ್ತಿದೆ. ಜನಗಳ ಭಾರತವಾಗದೆ ದನಗಳ ಭಾರತವಾಗಿದೆ. ಇದನ್ನು ಬದಲಿಸಬೇಕಾದರೆ ಮುಸ್ಲಿಮರು, ದಲಿತರು, ಹಿಂದುಳಿದ ವರ್ಗದವರು ಒಂದಾಗಬೇಕು. ಬಿಜೆಪಿ ಪ್ರಸ್ತುತ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣ ಮಾಡಬೇಕು ಎಂದು ಭಾಷಣ ಮಾಡುತ್ತಿದೆ. ಒಂದು ವೇಳೆ ನಾವೆಲ್ಲಾ ಒಂದಾಗದಿದ್ದರೆ ಮುಂದಿನ ದಿನಗಳಲ್ಲಿ ಮುಸ್ಲಿಂ ಮುಕ್ತ, ಬೌದ್ಧ, ಜೈನ ಮುಕ್ತ ಭಾರತ ನಿರ್ಮಾಣ ಮಾಡುವುದಾಗಿ ತಿಳಿಸುತ್ತಾರೆ. ಹೀಗಾಗಿ ಅಹಿಂದ ವರ್ಗದವರು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಎಸ್‌ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಹನ್ನಾನ್, ಸಾಹಿತಿ ಯೋಗೀಶ್ ಮಾಸ್ಟರ್ ಸೇರಿದಂತೆ ಇತರೆ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.

 

Latest Videos
Follow Us:
Download App:
  • android
  • ios