ಅಸಂಘಟಿತ ಹಾಗೂ ಭವಿಷ್ಯನಿಧಿ ಸೌಲಭ್ಯದಿಂದ ವಂಚಿತರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಅವರನ್ನು ಭವಿಷ್ಯನಿಧಿ ವ್ಯಾಪ್ತಿಯೊಳಗೆ ತರವು ಕಾರ್ಯಕ್ಕೆ ಕಾರ್ಮಿಕರ ಭವಿಷ್ಯ ನಿಧಿ ಇಲಾಖೆ(ಇಪಿಎಫ್) ಮುಂದಾಗಿದ್ದು, ಇದಕ್ಕಾಗಿ ಮಾರ್ಚ್‌ವರೆಗೆ ನೌಕರರ ವಿಶೇಷ ನೋಂದಾಣಿ ಅಭಿಯಾನ ಆರಂಭಿಸಿದೆ.
ಬೆಂಗಳೂರು (ಜ.20): ಅಸಂಘಟಿತ ಹಾಗೂ ಭವಿಷ್ಯನಿಧಿ ಸೌಲಭ್ಯದಿಂದ ವಂಚಿತರಾಗಿರುವ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯನ್ನು ಒದಗಿಸುವ ಉದ್ದೇಶದಿಂದ ಅವರನ್ನು ಭವಿಷ್ಯನಿಧಿ ವ್ಯಾಪ್ತಿಯೊಳಗೆ ತರವು ಕಾರ್ಯಕ್ಕೆ ಕಾರ್ಮಿಕರ ಭವಿಷ್ಯ ನಿಧಿ ಇಲಾಖೆ(ಇಪಿಎಫ್) ಮುಂದಾಗಿದ್ದು, ಇದಕ್ಕಾಗಿ ಮಾರ್ಚ್ವರೆಗೆ ನೌಕರರ ವಿಶೇಷ ನೋಂದಾಣಿ ಅಭಿಯಾನ ಆರಂಭಿಸಿದೆ.
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಇಲಾಖೆಯ ಬೆಂಗಳೂರು ಪ್ರಾದೇಶಿಕ ಆಯುಕ್ತ-1 ಮನೀಷ್ ಅಗ್ನಿಹೋತ್ರಿ, ಯಾವುದೇ ಕಾರಣದಿಂದಾಗಿ ತಮ್ಮ ಸಂಸ್ಥೆ, ಕಾರ್ಖಾನೆ, ಕೈಗಾರಿಕೆಗಳಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಭವಿಷ್ಯನಿಧಿ ಸದಸ್ಯತ್ವವನ್ನು ನೀಡದಿದ್ದಲ್ಲಿ ಸಂಸ್ಥೆಗಳ ಮಾಲೀಕರು ಅಭಿಯಾನದ ಮೂಲಕ ಸ್ವಯಂ ಪ್ರೇರಿತವಾಗಿ ನೌಕರರ ನೋಂದಾಣಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು.
ಮಾಲೀಕರು ತಮ್ಮ ಸಂಸ್ಥೆ, ಕಾರ್ಖಾನೆ, ಕೈಗಾರಿಕೆಗಳಲ್ಲಿ 1ನೇ ಏಪ್ರಿಲ್ 2009 ರಿಂದ 31ನೇ ಡಿಸೆಂಬರ್ 2016 ರವರೆಗೆ ಕಾರ್ಯ ನಿರ್ವಹಿಸಿರುವ ಕಾರ್ಮಿಕರನ್ನು ಭವಿಷ್ಯನಿಧಿ ವ್ಯಾಪ್ತಿಗೆ ಒಳಪಡಿಸಬಹುದಾಗಿದೆ. ಅಭಿಯಾನದ ಸದುಪಯೋಗವನ್ನು ಪಡೆದು ನೌಕರರ ನೋಂದಣಿಗೆ ಮುಂದಾದಲ್ಲಿ ಮಾಲೀಕರ ವಂತಿಗೆಯಾದ ಶೇ.12 ರಷ್ಟನ್ನು ಮಾತ್ರ ಪಾವತಿಸುವ ಅವಕಾಶವನ್ನು ಕಲ್ಪಿಸಲಾಗಿದೆ. ಈ ವೇಳೆ ಮಾಲೀಕರಿಂದ ಯಾವುದೇ ಆಡಳಿತಾತ್ಮಕ ಶುಲ್ಕ ವಿಧಿಸುವುದಿಲ್ಲ ಮತ್ತು ನೋಂದಣಿ ಮಾಡುವ ಪ್ರತಿ ಕಾರ್ಮಿಕರಿಗೆ ಪ್ರತಿವರ್ಷಕ್ಕೆ ಕೇವಲ 1 ರೂ. ಮಾತ್ರ ಪಾವತಿಸಬೇಕಾಗುತ್ತದೆ ಎಂದು ವಿವರಿಸಿದರು.
ಉದ್ಯೋಗದಾತರು ತಮ್ಮ ಘೋಷಣೆಯನ್ನು ಕಾರ್ಮಿಕರ ಭವಿಷ್ಯನಿಧಿ ಸಂಘಟನೆ ಒದಗಿಸಿರುವ ನಿರ್ದಿಷ್ಟ ನಮೂನೆಯಲ್ಲಿಯೇ ನೀಡಬೇಕಾಗಿದ್ದು, ಈ ಘೋಷಣೆಯು ಪ್ರಸ್ತುತ ಚಾಲ್ತಿಯಲ್ಲಿರುವ/ಜೀವಂತವಾಗಿರುವ ನೌಕರರಿಗೆ ಮಾತ್ರ ಅನ್ವಯವಾಗುತ್ತದೆ. ಇದರೊಂದಿಗೆ ಕಾರ್ಮಿಕರ ಭವಿಷ್ಯನಿಧಿ ಕಾಯ್ದೆ 1952 ರ ಕಲಂ 26 ಬಿ ಅಥವಾ ಕಾರ್ಮಿಕರ ಭವಿಷ್ಯನಿಧಿ ಪಿಂಚಣಿ ಯೋಜನೆ 1995 ರ ಕಲಂ 8 ರ ಅಡಿಯಲ್ಲಿರುವ ಸಂಸ್ಥೆ ಅಥವಾ ಕಾರ್ಖಾನೆಗಳ ಮೇಲೆ ಯಾವುದೇ ವಿಚಾರಣೆಯಿರುವುದಿಲ್ಲ ಎಂದು ಮಾಹಿತಿ ನೀಡಿದರು.
ದೃಢೀಕರಣ ಪತ್ರದ ಕೃತ್ರಿಮವಲ್ಲ ಎಂದು ತಿಳಿಯುವವರೆಗೂ ಯಾವುದೇ ರೀತಿಯ ಪರಿಶೀಲನೆಗೆ ಸಂಸ್ಥೆ ಹಾಗೂ ಕಾರ್ಖಾನೆಗಳನ್ನು ಒಳಪಡುಸುವುದಿಲ್ಲ. ಮಾಲೀಕರು ಕಾರ್ಮಿಕರನ್ನು ಭವಿಷ್ಯನಿಧಿ ಸದಸ್ಯತ್ವಕ್ಕೆ ಸೇರ್ಪಡೆಗೊಳಿಸಿದ 15 ದಿನಗಳೊಳಗಾಗಿ ತಮ್ಮ ವಂತಿಗೆಯಾದ ಶೇ.12 ರಷ್ಟನ್ನು ಭವಿಷ್ಯನಿಧಿಗೆ ಪಾವತಿಸಬೇಕು. ಒಂದೊಮ್ಮೆ ಮಾರ್ಚ್ 31 ರೊಳಗಾಗಿ ಸ್ವಯಂ ಪ್ರೇರಿತವಾಗಿ ಕಾರ್ಮಿಕರಿಗೆ ಭವಿಷ್ಯನಿಧಿ ಸದಸ್ಯತ್ವ ನೀಡದಿದ್ದರೆ ಅಂತಹ ಸಂಸ್ಥೆಗಳಿಗೆ ನೋಟಿಸ್ ಜಾರಿಗೊಳಿಸಿ ದಂಡ ವಿಧಿಸಲಾಗುವುದು ಹಾಗೂ ಸಂಸ್ಥೆಯ ವಿರುದ್ಧ ನ್ಯಾಯಾಲಯಕ್ಕೆ ಹೋಗಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ಮಾತನಾಡಿದ ಕೇಂದ್ರ ಕಾರ್ಮಿಕರ ಭವಿಷ್ಯನಿಧಿ ಇಲಾಖೆ ಕರ್ನಾಟಕ ಮತ್ತು ಗೋವಾ ರಾಜ್ಯಗಳ ಆಯುಕ್ತ ವಿಜಯ್ ಕುಮಾರ್, ಇಲಾಖೆ ಮತ್ತು ಕೇಂದ್ರ ಸರ್ಕಾರದಿಂದ ಕಾರ್ಮಿಕರಿಗೆ ಅನುಕೂಲವಾಗುವ ಹಲವು ಯೋಜನೆಗಳು ಜಾರಿಯಾಗಿವೆ. ಆದರೆ ಮಾಧ್ಯಮಗಳು ಐಚ್ಛಿಕ ಹಾಗೂ ಕಡ್ಡಾಯ ಯೋಜನೆಗಳನ್ನು ಒಂದೇ ತಕ್ಕಡಿಗೆ ಹಾಕುವುದರಿಂದಾಗಿ ಕಾರ್ಮಿಕರಿಗೆ ತಪ್ಪು ಮಾಹಿತಿ ರವಾನೆಯಾಗುತ್ತಿದೆ. ಸದ್ಯ ಇಲಾಖೆಯಿಂದ ಸದಸ್ಯತ್ವ ಹೊಂದಿದ ಕಾರ್ಮಿಕರು ವಿಧಿವಶರಾದ ಹಿನ್ನೆಲೆಯಲ್ಲಿ ಅವರ ಕುಟುಂಬಕ್ಕೆ ₹6 ಲಕ್ಷ ವಿಮೆ ನೀಡುವ ಹೊಸದೊಂದು ಯೋಜನೆ ಜಾರಿಗೊಳಿಸಲಾಗಿದೆ. ಇದರೊಂದಿಗೆ ಕಾರ್ಮಿಕರಿಗೆ ₹1000 ದಿಂದ 15 ಸಾವಿರ ರು. ಪಿಂಚಣಿ ದೊರೆಯುವ ಯೋಜನೆಯು ಇಲಾಖೆಯ ಮುಂದಿದೆ ಎಂದರು.
ಕಾಲ್ಸೆಂಟರ್ ಸೇವೆ
ಬೆಂಗಳೂರು ಪ್ರಾದೇಶಿಕ ಕಚೇರಿಯಲ್ಲಿ ಶುಕ್ರವಾರ ಭವಿಷ್ಯನಿಧಿಗೆ ಸಂಬಂಧಿಸಿದ ದೂರುಗಳನ್ನು ಸ್ವೀಕರಿಸುವ ಕಾಲ್ಸೆಂಟರ್ಗೆ ಚಾಲನೆ ನೀಡಲಾಯಿತು. ಇಲಾಖೆಯಿಂದ ಆರಂಭಿಸಿರುವ ಅಭಿಯಾನ ಹಾಗೂ ಭವಿಷ್ಯನಿಧಿಗೆ ಸಂಬಂಧಿಸಿದ ಗೊಂದಲಗಳಿಗೆ 18604251068 ಕರೆ ಮಾಡಿ ಮಾಹಿತಿ ಪಡೆಯಬಹುದಾಗಿದೆ.
ಅಭಿಯಾನದಲ್ಲಿ ಯಾರೆಲ್ಲ ಸದಸ್ಯತ್ವ ಪಡೆಯಬಹುದು?
- ಚಾಲ್ತಿಯಲ್ಲಿರುವ ಅಥವಾ ಜೀವಂತವಾಗಿರುವ ಕಾರ್ಮಿಕ
- ಸಂಸ್ಥೆ, ಕಾರ್ಖಾನೆಯ ಮಾಲೀಕರಿಗೆ ಅನುಬಂಧ-11ನ್ನು ಪ್ರಸ್ತುತಪಡಿಸುವವರು
- 1-4-2009 ರಿಂದ 1-1-2017 ರ ನಡುವೆ ಯಾವ ಕಾರ್ಮಿಕರಿಗೆ ಸದಸ್ಯತ್ವ ಅವಶ್ಯಕತೆಯಿದೆಯೋ ಅವರಿಗೆ
- ಅಭಿಯಾನದ ಅವಧಿ: 1-1-2017 ರಿಂದ 31-3-2017
-ವರದಿ: ಸುನೀಲ್ ಕುಮಾರ್
