ಬೆಂಗಳೂರು :  ಪಿಇಎಸ್‌ ವಿಶ್ವವಿದ್ಯಾಲಯವು 2018ನೇ ಸಾಲಿನಲ್ಲಿ ಒಟ್ಟಾರೆ 3774 ವಿದ್ಯಾರ್ಥಿಗಳಿಗೆ 2.35 ಕೋಟಿ ಮೊತ್ತದ ವಿದ್ಯಾರ್ಥಿ ವೇತನ ವಿತರಿಸುತ್ತಿದೆ. ಈ ಮೂಲಕ ಕಳೆದ 2014-15ನೇ ಸಾಲಿನಿಂದ ಈ ವರೆಗೆ ಅಂದಾಜು .15.5 ಕೋಟಿ ಮೊತ್ತದ ವಿದ್ಯಾರ್ಥಿವೇತನ ನೀಡಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿವಿ ಕುಲಾಧಿಪತಿ ಪ್ರೊ.ಎಂ.ಆರ್‌.ದೊರೆಸ್ವಾಮಿ, ಪಿಇಎಸ್‌ ವಿಶ್ವವಿದ್ಯಾಲಯವು ಶನಿವಾರ (ನ.24) ಆಯೋಜಿಸಿರುವ ಸಂಸ್ಥಾಪನಾ ದಿನಾಚರಣೆಯಲ್ಲಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಗುತ್ತದೆ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ, ಕರ್ನಾಟಕ ವಿದ್ಯುತ್‌ ನಿಯಂತ್ರಣ ಮಂಡಳಿ ಅಧ್ಯಕ್ಷ ಎಂ.ಕೆ.ಶಂಕರ ಲಿಂಗೇಗೌಡ ಅವರು ಭಾಗವಹಿಸಲಿದ್ದಾರೆ ಎಂದರು.

ಪಿಇಎಸ್‌ ವಿಶ್ವವಿದ್ಯಾಲಯವು ಪ್ರೊ.ಸಿಎನ್‌ಆರ್‌ ರಾವ್‌ ಹೆಸರಿನಲ್ಲಿ 906 ಮತ್ತು ಪ್ರೊ.ಎಂ.ಆರ್‌.ಡಿ ಹೆಸರಿನಲ್ಲಿ 134, ಅತ್ಯುನ್ನತ ಶ್ರೇಣಿಯ 2734 ವಿದ್ಯಾರ್ಥಿಗಳು ಸೇರಿದಂತೆ ಒಟ್ಟಾರೆ 3774 ವಿದ್ಯಾರ್ಥಿಗಳಿಗೆ .2.35 ಕೋಟಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. 2014-15ರಿಂದ ನಾವು ವಿದ್ಯಾರ್ಥಿ ವೇತನ ನೀಡುತ್ತಿದ್ದು, ಈ ವರೆಗೆ ಒಟ್ಟಾರೆ 15.5 ಕೋಟಿ ವಿದ್ಯಾರ್ಥಿ ವೇತನಕ್ಕೆ ವಿನಿಯೋಗಿಸಲಾಗಿದೆ ಎಂದರು.

ಕನ್ನಡ ಮಾಧ್ಯಮ ವ್ಯಾಸಂಗ ಮಾಡಿರುವ ಗ್ರಾಮೀಣ ಭಾಗದ 460 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ, ನಾಲ್ಕೂ ವರ್ಷಗಳ ಎಂಜಿನಿಯರಿಂಗ್‌ ಕೋರ್ಸ್‌ನ ಬೋಧನಾ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ಕಾಲೇಜಿನ ಹೊರತಾಗಿ ಚೈನಾ ಮೂಲದ ಹುವೈ ಕಂಪನಿಯು 6 ವಿದ್ಯಾರ್ಥಿಗಳಿಗೆ ಪ್ರತಿ ವರ್ಷ 75 ಸಾವಿರ ಮತ್ತು ಮರ್ಸಿಡಿಸ್‌ ಬೆಂಜ್‌ ಕಂಪನಿಯು 3ನೇ ಸೆಮಿಸ್ಟರ್‌ನ ನಾಲ್ಕೂ ವಿದ್ಯಾರ್ಥಿನಿಯರನ್ನು ಆಯ್ಕೆ ಮಾಡಿಕೊಂಡು ಪ್ರತಿ ಒಬ್ಬ ವಿದ್ಯಾರ್ಥಿನಿಯರಿಗೆ 1 ಲಕ್ಷ ವಿದ್ಯಾರ್ಥಿ ವೇತನ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಐಇಟಿ ಮಾನ್ಯತೆ:  ಪಿಇಎಸ್‌ ವಿಶ್ವವಿದ್ಯಾಲಯಕ್ಕೆ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ(ಐಇಟಿ)ಯು ಪಿಇಎಸ್‌ನ 8 ಕೋರ್ಸ್‌ಗಳಿಗೆ ಮಾನ್ಯತೆ ನೀಡಿದೆ. ಈ ಮೂಲಕ ಭಾರತದಲ್ಲಿ ಮಾನ್ಯತೆ ಪಡೆದ 5ನೇ ವಿವಿ ಎಂಬ ಖ್ಯಾತಿ ಪಿಇಎಸ್‌ ವಿವಿಗೆ ಸಿಕ್ಕಿದೆ ಎಂದರು.

105ಕ್ಕೂ ಹೆಚ್ಚಿನ ಚರ್ಚಾ ಸ್ಪರ್ಧೆಯಲ್ಲಿ ಭಾಗವಹಿಸಿ 5 ಲಕ್ಷ ಬಹುಮಾನವಾಗಿ ಪಡೆದಿರುವ ಬಿ.ಇ. 5ನೇ ಸೆಮಿಸ್ಟರ್‌ ವಿದ್ಯಾರ್ಥಿ ಪ್ರೀತಂ ಉಪಾಧ್ಯ ಅವರನ್ನು ಸನ್ಮಾನಿಸಲಾಯಿತು. ಸುದ್ದಿಗೋಷ್ಠಿಯಲ್ಲಿ ವಿವಿ ಕುಲಪತಿ ಡಾ.ಕೆ.ಎನ್‌.ಬಾಲಸುಬ್ರಹ್ಮಣ್ಯ, ಪಿಇಎಸ್‌ ವಿವಿ ಪ್ಲೇಸ್‌ಮೆಂಟ್‌ ಅಧಿಕಾರಿ ಶ್ರೀಧರ್‌ ಉಪಸ್ಥಿತರಿದ್ದರು.