ಕೋಲಾರ[ಏ.02]: ಕಾಡಾನೆಗಳೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಹೋಗಿ ಯುವಕನೋರ್ವ ಕಣ್ಣು ಕಳೆದುಕೊಂಡ ಘಟನೆ ಮಾಲೂರು ತಾಲೂಕಿನ ಕಾಟೇರಿ ಗ್ರಾಮದ ಸಮೀಪ ಬುಧವಾರ ನಡೆದಿದೆ.

ರಾಜಪ್ಪ (24) ಕಣ್ಣು ಕಳೆದುಕೊಂಡ ಯುವಕ. ಮಾಲೂರು ತಾಲೂಕಿನ ಅರಳೇರಿ ಗ್ರಾಮದ ಹೊರವಲಯದದಲ್ಲಿದ್ದ ಬಾಳೆ, ಹಲಸು, ಟೊಮೆಟೊ, ಸೌತೆಕಾಯಿ ತೋಟಗಳ ಮೇಲೆ ದಾಳಿ ನಡೆಸಿದ ಆನೆಗಳ ಹಿಂಡು ಕಾಟೇರಿ ಗ್ರಾಮದ ಕೆರೆಯ ಬಳಿ ಬೀಡು ಬಿಟ್ಟಿದ್ದವು. ಈ ವೇಳೆ ಹತ್ತಿರದಿಂದ ಸೆಲ್ಫಿ ತೆಗೆದುಕೊಳ್ಳಲು ರಾಜಪ್ಪ ಆನೆಗಳ ಸಮೀಪ ಹೋಗಿದ್ದು, ಆನೆಗಳು ಆತನನ್ನು ಅಟ್ಟಿಸಿಕೊಂಡು ಬಂದಿವೆ.

ಈ ವೇಳೆ ಆನೆಗಳಿಂದ ತಪ್ಪಿಸಿಕೊಂಡು ಓಡುವಾಗ ರಾಜಪ್ಪ ಎಡವಿ ಬಿದ್ದಿದ್ದು, ಆಗ ನೀಲಗಿರಿ ಕಡ್ಡಿಯೊಂದು ನೇರವಾಗಿ ಆತನ ಎಡಗಣ್ಣಿಗೆ ಚುಚ್ಚಿದ್ದು, ಕಣ್ಣು ಕಳೆದುಕೊಂಡಿ ದ್ದಾನೆ. ಗಾಯಾಳುವನ್ನು ಕೋಲಾರದ ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮದ ಸುತ್ತ ೬ ಕಾಡಾನೆಗಳು ಬೀಡು ಬಿಟ್ಟಿದ್ದು, ಅವುಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ.