ಬೆಂಗಳೂರು: ವಿಧಾನಸೌಧ ಮತ್ತು ನೆಹರು ತಾರಾಲಯದಲ್ಲಿ ಬಾಂಬ್ ಇಡುತ್ತಾರೆ ಎಂದು ‘ನಮ್ಮ-100ಗೆ’ ಹುಸಿ ಕರೆ ಮಾಡಿದ್ದ ಆರೋಪಿಯನ್ನು ವಿಧಾನಸೌಧ ಠಾಣೆ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

ಮೂಲತಃ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಶ್ರೀಧರ್ (22) ಬಂಧಿತ. ಆರೋಪಿ ಶ್ರೀಧರ್ ದ್ವಿತೀಯ ಪಿಯುಸಿ ವ್ಯಾಸಂಗ ಮಾಡಿದ್ದು, ಕಳೆದ ಆರೇಳು ತಿಂಗಳಿಂದ ಪೀಣ್ಯದ ಕೊಠಡಿಯೊಂದರಲ್ಲಿ ವಾಸವಿದ್ದ. ಯಾವುದೇ ಕೆಲಸಕ್ಕೆ ಹೋಗದ ಶ್ರೀಧರ್ ಕೆಲಸ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ.

ಹೀಗೆ ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಹಲವು ನಿರುದ್ಯೋಗಿಗಳಿಂದ ಒಟ್ಟಾರೆ ₹5 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ್ದನು. ನಗರದ ಪೀಣ್ಯ ಸಮೀಪದ ಫೋಟೋ ಸ್ಟುಡಿಯೋ ಬಳಿ ಆರೋಪಿ ರೂಮ್ ಮಾಡಿದ್ದ. ಹೀಗಾಗಿ ಶ್ರೀಧರ್‌ಗೆ ಫೋಟೋಗ್ರಾಫರ್ ನಾಗರಾಜ್ ಎಂಬುವನ ಪರಿಚಯವಾಗಿತ್ತು. ನಾಗರಾಜನ ಬಳಿ, ನಾನು ಸರ್ಕಾರಿ ಕೆಲಸ ಕೊಡಿಸುತ್ತೇನೆ. ಹಲವು ಮಂದಿ ಪರಿಚಯ ಇದ್ದಾರೆ ಎಂದು ಹೇಳಿಕೊಂಡಿದ್ದ. ಆರೋಪಿ ಹೇಳಿದ್ದನ್ನು ನಾಗರಾಜ್ ನಂಬಿದ್ದ. ಎಂಜಿನಿಯರಿಂಗ್ ವ್ಯಾಸಂಗ ಮಾಡಿರುವ ನಾಗರಾಜ್ ಸ್ನೇಹಿತ ಸುರೇಶ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಸುರೇಶ್‌ಗೆ ಕಡಿಮೆ ವೇತನ ಬರುತ್ತಿದ್ದರಿಂದ ಸೂಕ್ತ ಕೆಲಸಕ್ಕೆ ಹುಡುಕಾಟ ನಡೆಸಿದ್ದ. ಸ್ನೇಹಿತ ಕೆಲಸ ಹುಡುತ್ತಿದ್ದ ವಿಚಾರ ತಿಳಿದ ನಾಗರಾಜ್, ಆರೋಪಿ ಶ್ರೀಧರ್‌ಗೆ ಸುರೇಶ್‌ನನ್ನು ಪರಿಚಯಿ ಸಿಕೊಟ್ಟಿದ್ದ.

ಆರ್‌ಟಿಓದಲ್ಲಿ ಕೆಲಸ: ಸುರೇಶ್‌ಗೆ ಆರ್‌ಟಿಓದಲ್ಲಿ ಕೆಲಸ ಕೊಡಿಸುವುದಾಗಿ ಆರೋಪಿ ₹60 ಸಾವಿರ ಮುಂಗಡ ಹಣ ಪಡೆದಿದ್ದ. ಹಣ ಕೊಟ್ಟು ಮೂರು ತಿಂಗಳಾದರೂ ಕೆಲಸಕ್ಕೆ ಸಂದರ್ಶನ ಬಂದಿರಲಿಲ್ಲ. ಸಮಜಾಯಿಷಿ ನೀಡುತ್ತ ಶ್ರೀಧರ್ ಕಾಲ ಕಳೆಯುತ್ತಿದ್ದ.

ಬಳಿಕ ಎಚ್ಚೆತ್ತ ಸುರೇಶ್ ಮತ್ತು ನಾಗರಾಜ್ ಆರೋಪಿಯನ್ನು ಕರೆಸಿಕೊಂಡು ಹಣ ವಾಪಸ್ ನೀಡುವಂತೆ ಒತ್ತಾಯ ಮಾಡಿದ್ದರು. ಬಳಿಕ ಶ್ರೀಧರ್ ಮೂರು ಕಂತಿನಲ್ಲಿ ₹30 ಸಾವಿರ ಹಣ ವಾಪಸ್ ಮರಳಿಸಿದ್ದ. ಸೆ.10ರಂದು ಉಳಿದ ಹಣ ನೀಡದಿದ್ದರೆ, ಪೊಲೀಸರಿಗೆ ದೂರು ನೀಡುವುದಾಗಿ ಸುರೇಶ್ ಬೆದರಿಸಿದಾಗ ಆರೋಪಿ ತನ್ನ ಬಳಿ ಇರುವ ಲ್ಯಾಪ್’ಟಾಪ್‌ವೊಂದನ್ನು ಕೊಟ್ಟು ಸ್ಥಳದಿಂದ ಪರಾರಿಯಾಗಿದ್ದನು. ನನ್ನ ವಿರುದ್ಧವೇ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಕ್ಕೆ ಆರೋಪಿ, ನಾಗರಾಜ್ ಮತ್ತು ಸುರೇಶ್ ವಿರುದ್ಧ ಕೋಪಗೊಂಡಿದ್ದ. ಇಬ್ಬರನ್ನು ಪೊಲೀಸರ ಕೈಗೆ ಸಿಲುಕಿಸಬೇಕೆಂಬ ನಿರ್ಧರಿಸಿದ್ದ. ಅದರಂತೆ ಸೋಮವಾರ ಮಧ್ಯಾಹ್ನ 12.50ರ ಸುಮಾರಿಗೆ ‘ನಮ್ಮ-100’ಕ್ಕೆ (ಪೊಲೀಸ್ ನಿಯಂತ್ರಣ ಕೊಠಡಿ) ಕರೆ ಮಾಡಿ, ‘ನನ್ನ ಹೆಸರು ಸುರೇಶ್. ನಾಗರಾಜ್ ಎಂಬ ವ್ಯಕ್ತಿ ಸೆ.25ರೊಳಗೆ ವಿಧಾನಸೌಧ ಮತ್ತು ನೆಹರು ತಾರಾಲಯಕ್ಕೆ ಬಾಂಬ್ ಇಡಲಿದ್ದಾನೆ. ಅದನ್ನು ತಡೆಯಿರಿ’ ಎಂದು ನಾಗರಾಜ್‌ನ ಮೊಬೈಲ್ ಸಂಖ್ಯೆ ಕೊಟ್ಟು ಕರೆ ಸ್ಥಗಿತಗೊಳಿಸಿದ್ದನು. ಹೀಗಾಗಿ ವಿಧಾನಸೌಧ ಪೊಲೀಸರು ಬಾಂಬ್ ನಿಷ್ಕ್ರಿಯದಳ ಮತ್ತು ಶ್ವಾನ ಸಿಬ್ಬಂದಿಯೊಂದಿಗೆ ಸೋಮವಾರ ತೀವ್ರ ತಪಾಸಣೆ ನಡೆಸಿದ್ದರು.

ತಪಾಸಣೆ ವೇಳೆ ‘ನಮ್ಮ-100’ಕ್ಕೆ ಕರೆ ಮಾಡಿರುವುದು ಹುಸಿ ಕರೆ ಎಂಬುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ನಾಗರಾಜ್‌ನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಿದಾಗ ಶ್ರೀಧರ್ ಕರೆ ಮಾಡಿದ್ದಾನೆ ಎಂದು ತಿಳಿದಿದೆ. ಹೀಗಾಗಿ ಆರೋಪಿಯನ್ನು ಮದ್ದೂರಿನಲ್ಲಿ ಬಂಧಿಸಲಾಯಿತು ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ತನ್ನ ಮೊಬೈಲ್’ನಲ್ಲೇ ಕರೆ ಮಾಡಿ ಸಿಕ್ಕ

‘ನಮ್ಮ-100’ಕ್ಕೆ ಬಂದಿದ್ದ ಮೊಬೈಲ್ ಸಂಖ್ಯೆ ಪರಿಶೀಲನೆ ನಡೆಸಿದಾಗ ಅದು ಶ್ರೀಧರ್ ಎಂಬ ಹೆಸರಿನಲ್ಲಿರುವುದು ಪತ್ತೆಯಾಯಿತು. ಆರೋಪಿ ಶ್ರೀಧರ್ ಪರಿಚಯಸ್ಥರನ್ನು ಸಿಲುಕಿಸಬೇಕೆಂಬ ಆತುರದಲ್ಲಿ ತನ್ನದೇ ಮೊಬೈಲ್‌ನಲ್ಲಿ ‘ನಮ್ಮ-100’ಕ್ಕೆ ಕರೆ ಮಾಡಿದ್ದ. ಅಲ್ಲದೆ, ನಿಯಂತ್ರಣ ಕೊಠಡಿಗೆ ಆರೋಪಿ ಕೊಟ್ಟಿದ್ದ ವ್ಯಕ್ತಿಯ ನಂಬರ್ ಪಡೆದು ನಾಗರಾಜ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕರೆ ಮಾಡಿರುವುದು ಶ್ರೀಧರ್ ಎಂಬುದು ಖಚಿತವಾಗಿತ್ತು ಎಂದು ಪೊಲೀಸರು ಹೇಳಿದರು. ಇನ್ನು ಕರೆ ಮಾಡಿದ ಬಳಿಕ ಶ್ರೀಧರ್ ಮೊಬೈಲ್‌ನ್ನು ಸ್ವಿಚ್ ಆಫ್ ಮಾಡಿ ಚಿತ್ರದುರ್ಗಕ್ಕೆ ಬಸ್ ಹತ್ತಿದ್ದ. ಆಗ್ಗಾಗ್ಗೆ ಮೊಬೈಲ್ ಆನ್ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಸಂಪರ್ಕಿಸಿದಾಗ ಕರೆ ಸ್ಥಗಿತಗೊಳಿಸುತ್ತಿದ್ದ. ಮೊಬೈಲ್ ಸಂಪರ್ಕ ತಿಳಿದು ಆರೋಪಿಯನ್ನು ಮದ್ದೂರಿನಲ್ಲಿ ಬಂಧಿಸಲಾಯಿತು ಎಂದು ತಿಳಿಸಿದರು.