ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು, ಪ್ರಮುಖ ನಿರ್ಧಾರ ತೆಗೆದುಕೊಳ್ಳಲು ತನ್ನ ಪರ ಪ್ರತಿನಿಧಿ ಆರಿಸಿದ ಸಂಸದ ಸನ್ನಿ ಡಿಯೋಲ್| ಪ್ರತಿನಿಧಿ ಆರಿಸಿದ ಸಂಸದ ಈಗ ಫುಲ್ ಟ್ರೋಲ್| ನಗೆಪಾಟಲಿಗೀಡಾದ ಗುರುದಾಸ್‌ಪುರ ಸಂಸದ ಸನ್ನಿ ಡಿಯೋಲ್!
ಗುರುದಾಸ್‌ಪುರ್[ಜು.02]: ಪಂಜಾಬ್ ನ ಗುರುದಾಸ್ ಪುರದಿಂದ ಸಂಸದನಾಗಿ ಚುನಾಯಿತರಾದ ನಟ ಸನ್ನಿ ಡಿಯೋಲ್ ಸರ್ಕಾರಿ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿನಿಧಿಯಾಗಿ ಭಾಗವಹಿಸಲು ಲೇಖಕ ಗುರುಪ್ರೀತ್ ಸಿಂಗ್ ರನ್ನು ನೇಮಿಸಿಕೊಂಡಿದ್ದಾರೆ. 'ನನ್ನ ಪರವಾಗಿ ಸಭೆ ಹಾಗೂ ಮುಖ್ಯವಾದ ವಿಚಾರಗಳ ಬಗ್ಗೆ ಗುರುಪ್ರೀತ್ ಸಿಂಗ್ ನಿರ್ಧಾರ ಕೈಗೊಳ್ಳಲಿದ್ದಾರೆ' ಎಂದು ಸನ್ನಿ ಡಿಯೋಲ್ ಘೋಷಿಸಿದ್ದಾರೆ.
ಆದರೆ ಸಂಸದನ ಈ ಘೋಷಣೆಗೆ ಭಾರೀ ವಿರೋಧ ವ್ಯಕ್ತವಾಗಿದ್ದು, ಟ್ವಿಟರ್ ನಲ್ಲಿ ಭಾರೀ ಟ್ರೋಲ್ ಆಗುತ್ತಿದೆ.
ಪಂಜಾಬ್ ಸಚಿವ ಹಾಗೂ ಕಾಂಗ್ರೆಸ್ ನಾಯಕ ಸುಖಿಂದರ್ ಸಿಂಗ್ ರಂಧಾವಾ, ‘ಡಿಯೋಲ್ ಅವರು ತಮ್ಮ ಕ್ಷೇತ್ರಕ್ಕೆ ಪ್ರತಿನಿಧಿಯೊಬ್ಬರನ್ನು ನೇಮಿಸಿಕೊಳ್ಳುವ ಮೂಲಕ ಜನಾದೇಶಕ್ಕೆ ದ್ರೋಹ ಬಗೆದಿದ್ದಾರೆ. ಓರ್ವ ಸಂಸದ ಹೇಗೆ ತನ್ನ ಪ್ರತಿನಿಧಿಯನ್ನು ನೇಮಿಸಿಕೊಳ್ಳುತ್ತಾರೆ. ಮತದಾರರು ಡಿಯೋಲ್ ಅವರನ್ನು ಸಂಸದರನ್ನಾಗಿ ಆರಿಸಿದ್ದಾರೆ. ಡಿಯೋಲ್ ಅವರ ಪ್ರತಿನಿಧಿಯನ್ನಲ್ಲ’ ಎಂದು ಕಿಡಿಕಾರಿದ್ದಾರೆ.
