ಮುನ್ನಾರ್‌ [ಆ.02]: ಪ್ರಧಾನಿ ನರೇಂದ್ರ ಮೋದಿ ಅವರು ಅಂಚೆ ಖಾತೆಗೆ 15 ಲಕ್ಷ ರು. ಜಮೆ ಮಾಡುತ್ತಾರೆ ಎಂಬ ಗಾಳಿಸುದ್ದಿ ನಂಬಿದ ಭಾರೀ ಪ್ರಮಾಣದ ಜನರು ಸೇವಿಂಗ್‌ ಖಾತೆ ಮಾಡಿಸಲು ಅಂಚೆ ಕಚೇರಿಗೇ ನುಗ್ಗಿದ ಘಟನೆ ತಮಿಳುನಾಡಿನ ಮುನ್ನಾರ್‌ನಲ್ಲಿ ನಡೆದಿದೆ. ಇದರ ಪರಿಣಾಮ ಕಳೆದ ಮೂರು ದಿನಗಳಿಂದ ನೋಟು ಅಪನಗದೀಕರಣದ ಸಂದರ್ಭದಲ್ಲಿ ನೋಟು ಬದಲಾವಣೆಗಾಗಿ ಬ್ಯಾಂಕಿನ ಮುಂದೆ ಸಾಲುಗಟ್ಟಿದ ರೀತಿಯಲ್ಲಿ ಮುನ್ನಾರ್‌ ಅಂಚೆ ಕಚೇರಿಯ ಎದುರು ಸಾರ್ವಜನಿಕರು ಸಾಲುಗಟ್ಟಿನಿಂತಿರುವ ದೃಶ್ಯಗಳು ಕಂಡುಬಂದಿವೆ.

ಅಷ್ಟಕ್ಕೂ ಆಗಿದ್ದೇನು ಅಂದ್ರೆ, ಅಂಚೆ ಕಚೇರಿಯಲ್ಲಿ ಖಾತೆ ಹೊಂದಿದವರ ಖಾತೆಗೆ ಕೇಂದ್ರ ಸರ್ಕಾರ 3 ಲಕ್ಷ ರು.ನಿಂದ 15 ಲಕ್ಷ ರು.ವರೆಗೂ ಹಣ ಹಾಕುವ ವಾಗ್ದಾನ ಮಾಡಿದೆ ಎಂಬ ವದಂತಿ ಶನಿವಾರ ಸಂಜೆ ವಾಟ್ಸಾಪ್‌ ಮೂಲಕ ಈ ಪ್ರದೇಶದಾದ್ಯಂತ ಮಿಂಚಿನಂತೆ ಹಬ್ಬಿದೆ. 

ಇದೇ ಕಾರಣಕ್ಕಾಗಿ ಎಸ್ಟೇಟ್‌ನಲ್ಲಿ ಕೆಲಸ ಮಾಡುವ ಕಾರ್ಮಿಕರು ಸೇರಿದಂತೆ ಹಲವರು ತಮ್ಮ ಕೆಲಸಕ್ಕೆ ರಜೆ ಹಾಕಿ ತಾವು ಒಂದು ಖಾತೆ ತೆರೆದೇ ಬಿಡೋಣ ಎಂದು ಬಂದಿದ್ದರು. ಇದರಿಂದ ಕೂಲಿ ಕಾರ್ಮಿಕರು ತಮ್ಮ ಒಂದು ದಿನದ ಕೂಲಿ ಕಳಕೊಂಡರೆ, ಮುನ್ನಾರ್‌ ಪೋಸ್ಟ್‌ ಆಫೀಸಿನಲ್ಲಿ ಹೆಚ್ಚು ಹೊಸ ಖಾತೆಗಳು ತೆರೆದುಕೊಂಡವು. ಮತ್ತೊಂದೆಡೆ, ಸೋಮವಾರ ಸರ್ಕಾರ ಉಚಿತ ಮನೆ ಮತ್ತು ಜಮೀನು ನೀಡುತ್ತಿದೆ ಎಂಬ ಗಾಳಿಸುದ್ದಿ ಹಬ್ಬಿದ್ದು, ದೇವಿಕುಲಂನಲ್ಲಿರುವ ಪ್ರಾದೇಶಿಕ ಜಿಲ್ಲಾ ಕಚೇರಿ ಇಲ್ಲಿಯೂ ಭಾರೀ ಪ್ರಮಾಣದ ಜನರು ಸೇರಿದ್ದರು.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅಂಚೆ ಕಚೇರಿ ಅಧಿಕಾರಿ, ‘ಅಂಚೆ ಖಾತೆಗಳಿಂದ ಸಾರ್ವಜನಿಕರು ಸರ್ಕಾರದ ಸೌಲಭ್ಯ ಪಡೆದುಕೊಳ್ಳಲಿದ್ದಾರೆ ಎಂಬ ಯಾವುದೇ ಮಾಹಿತಿ ತಾವು ನೀಡಿಲ್ಲ. ಕಳೆದ ವಾರ, ಅಂಚೆ ಇಲಾಖೆಯಿಂದ 1 ಕೋಟಿ ಹೊಸ ಖಾತೆಗಳು ತೆರೆಯಬೇಕೆಂಬ ಸೂಚನೆ ಬಂದಿದೆ. ಇದಕ್ಕಾಗಿ ಅಗತ್ಯವಿರುವ ಕ್ರಮ ಕೈಗೊಂಡಿದ್ದೇವೆ. ಈ ಪ್ರಕಾರ, ಅಂಚೆ ಕಚೇರಿಯಲ್ಲಿ ಸೇವಿಂಗ್‌ ಖಾತೆ ತೆರೆಯಲು ಸಾರ್ವಜನಿಕರು ತಮ್ಮ ಆಧಾರ್‌, ಎರಡು ಪಾಸ್‌ಪೋರ್ಟ್‌ ಮಾದರಿಯ ಫೋಟೋಗಳು, 100 ರು. ಠೇವಣಿ ಇಡಬೇಕು’ ಎಂದರು.