ಉತ್ತರ ಪ್ರದೇಶದ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಜಿಲ್ಲೆ ಎಂದು ಬದಲಾಯಿಸಿದ ಬೆನ್ನಲ್ಲೇ ಇದೀಗ ಇತರ ರಾಜ್ಯದ ಹಲವು ಜಿಲ್ಲೆಗಳ ಹೆಸರು ಬದಲಾಯಿಸಲು ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿದೆ. ಇದೀಗ ಗುಜರಾತ್‌ನ ಅಹಮದಾಬಾದ್ ಇನ್ಮುಂದೆ ಕರ್ಣವತಿಯಾಗಿ ಬದಲಾಗಲಿದೆ.
ಅಹಮದಾಬಾದ್(ನ.08): ಉತ್ತರಪ್ರದೇಶದ ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಜಿಲ್ಲೆ ಎಂದು ನಾಮಕರಣ ಮಾಡುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಣೆ ಮಾಡಿದ ಬೆನ್ನಲ್ಲೇ, ಗುಜರಾತಿನ ಅತಿದೊಡ್ಡ ನಗರ ಅಹಮದಾಬಾದ್ ಹೆಸರನ್ನು ‘ಕರ್ಣವತಿ’ ಎಂದು ಮರುನಾಮಕರಣ ಮಾಡಲು ರಾಜ್ಯ ಸರ್ಕಾರ ಇಂಗಿತ ವ್ಯಕ್ತಪಡಿಸಿದೆ.
ಕಾನೂನಿನ ಅಡೆತಡೆ ಎದುರಿಸುವಷ್ಟುಜನ ಬೆಂಬಲ ದೊರೆತಲ್ಲಿ ಅಹಮದಾಬಾದ್ ಹೆಸರನ್ನು ಕರ್ಣವತಿ ಮಾಡಲು ಸಿದ್ಧರಿದ್ದೇವೆ ಎಂದು ಉಪಮುಖ್ಯಮಂತ್ರಿ ನಿತಿನ್ ಪಟೇಲ್ ತಿಳಿಸಿದ್ದಾರೆ. ಅವರ ಹೇಳಿಕೆಗೆ ಕಾಂಗ್ರೆಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಇದೊಂದು ರಾಜಕೀಯ ಗಿಮಿಕ್. ಹಿಂದುಗಳ ಮತ ಗಿಟ್ಟಿಸಲು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದಾಗಿ, ಅಹಮದಾಬಾದ್‌ಗೆ ಹೆಸರನ್ನು ಕರ್ಣವತಿ ಎಂದು ಬದಲಿಸುವುದಾಗಿ ಬಿಜೆಪಿ ಹೇಳುತ್ತಿದೆ ಎಂದು ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ತಿಳಿಸಿದ್ದಾರೆ.
ಚಾಲುಕ್ಯರ ಅರಸ ಕರ್ಣ ಎಂಬಾತ ಸಾಬರಮತಿ ನದಿ ದಂಡೆಯಲ್ಲಿ ಕರ್ಣವತಿ ಎಂಬ ನಗರ ನಿರ್ಮಿಸಿದ್ದ. ಆನಂತರ 1411ರಲ್ಲಿ ಬಂದ ಸುಲ್ತಾನ್ ಅಹಮದ್ ಶಾ ಎಂಬಾತ ಕರ್ಣವತಿ ಸಮೀಪವೇ ಹೊಸ ನಗರ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದ. ಅಲ್ಲಿ ಅಹಮದ್ ಎಂಬ ನಾಲ್ವರು ಸಂತರು ಇದ್ದ ಹಿನ್ನೆಲೆಯಲ್ಲಿ ಆ ನಗರಕ್ಕೆ ಅಹಮದಾಬಾದ್ ಎಂದು ನಾಮಕರಣ ಮಾಡಿದ್ದ ಎಂಬ ಐತಿಹ್ಯವಿದೆ.
