ಉಡುಪಿ (ನ. 11): ಅನಂತ್ ಕುಮಾರ್ ನಿಧನಕ್ಕೆ ಪೇಜಾವರ ಶ್ರೀಗಳು ಸಂತಾಪ ಸೂಚಿಸಿದ್ದಾರೆ.

ನಮ್ಮ ರಾಜ್ಯದ ನಾಯಕರಲ್ಲಿ ಒಬ್ಬರಾದ ಶ್ರೀಯುತ ಅನಂತ ಕುಮಾರ್ ನಿಧನದಿಂದ ನಮಗೆ ಅತ್ಯಂತ ವಿಷಾದವಾಗಿದೆ.  ಇವರು ಕೇಂದ್ರ ಸಚಿವರಾಗಿ ರಾಜ್ಯದ ಅಭಿವೃದ್ಧಿಗೆ ಬಹುಮುಖವಾದ ಸೇವೆಯನ್ನು ಸಲ್ಲಿಸಿದ ಧೀಮಂತ ನೇತಾರರಾಗಿದ್ದರು. ನಮ್ಮ ಪರ್ಯಾಯದ ಅವಧಿಯಲ್ಲಿ ನಿರ್ಮಾಣಗೊಂಡ ಕನಕ ಮಂಟಪ ಕಾರ್ಯ, ಪಾಜಕ ಕ್ಷೇತ್ರದ ಅಭಿವೃದ್ಧಿ ಮುಂತಾದ ಅನೇಕ ಕಾರ್ಯಗಳಿಗೆ ಸರಕಾರದಿಂದ ಸಹಾಯ ಕೊಡಿಸಿದ್ದರು. 

ದಕ್ಷರೂ,ತರುಣರೂ,ಉತ್ಸಾಹಶೀಲರೂ ಆಗಿರುವ ಇವರಿಂದ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಸೇವೆ ದೊರೆಯುವ ನಿರೀಕ್ಷೆಯಿತ್ತು.ಇವರ ಅಕಾಲಿಕ ನಿಧನದಿಂದ ರಾಜ್ಯಕ್ಕೆ ಅಪಾರ ನಷ್ಟವಾಗಿದೆ. ಇವರಿಗೆ ಭಗವಂತನು ಸದ್ಗತಿಯನ್ನು ನೀಡಲಿ ಎಂದು ಶ್ರೀ ವಿಶ್ವೇಶತೀರ್ಥ ಶ್ರೀ ಪಾದರು ಹೇಳಿದ್ದಾರೆ.