ಕಳೆದ 15 ದಿನಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಪಿಡಿಪಿ ಮುಖಂಡರ ಮೇಲೆ ನಡೆದಿರುವ ದಾಳಿ ಇದು ಮೂರನೆಯದ್ದಾಗಿದೆ. ಪ್ರಧಾನಿ ಮೋದಿ ಜೊತೆ ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಮಾತುಕತೆ ನಡೆಸಿರುವ ಬೆನ್ನಲ್ಲೇ ಈ ಹತ್ಯೆ ಘಟನೆ ನಡೆದಿರುವುದು ಗಮನಾರ್ಹ.

ಶ್ರೀನಗರ(ಏ. 24): ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಪಿಡಿಪಿ ಮುಖಂಡ ಅಬ್ದುಲ್ ಗನಿ ದರ್ ಅವರನ್ನು ಉಗ್ರಗಾಮಿಗಳು ಹತ್ಯೆಗೈದಿದ್ದಾರೆ. ಇಂದು ಬೆಳಗ್ಗೆ ಜಿಲ್ಲೆಯ ರೋಹಮೂ ಗ್ರಾಮದಲ್ಲಿ ಅಬ್ದುಲ್ ಗನಿ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಕೆಲ ಗಂಟೆಗಳ ಬಳಿಕ ಗನಿ ಕೊನೆಯುಸಿರೆಳೆದಿದ್ದಾರೆ. ಉಗ್ರರ ದಾಳಿಯಿಂದ ತೀವ್ರವಾಗಿ ಗಾಯಗೊಂಡಿದ್ದ ಅಬ್ದುಲ್ ಗನಿ ಅವರನ್ನು ತತ್'ಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಸೇರಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು. ಆನಂತರ ಅವರನ್ನು ಶ್ರೀನಗರದ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ.

ಕಳೆದ 15 ದಿನಗಳಲ್ಲಿ ದಕ್ಷಿಣ ಕಾಶ್ಮೀರದಲ್ಲಿ ಪಿಡಿಪಿ ಮುಖಂಡರ ಮೇಲೆ ನಡೆದಿರುವ ದಾಳಿ ಇದು ಮೂರನೆಯದ್ದಾಗಿದೆ. ಇಂದು ಬಲಿಯಾದ ಅಬ್ದುಲ್ ಗನಿ ದರ್ ಅವರು ಮೂಲತಃ ಕಾಂಗ್ರೆಸ್ಸಿಗರಾಗಿದ್ದು, 2014ರಲ್ಲಿ ಪಿಡಿಪಿ ಪಕ್ಷ ಸೇರಿಕೊಂಡಿದ್ದರು.

ಪ್ರಧಾನಿ ಮೋದಿ ಜೊತೆ ಕಾಶ್ಮೀರ ಸಿಎಂ ಮೆಹಬೂಬಾ ಮುಫ್ತಿ ಮಾತುಕತೆ ನಡೆಸಿರುವ ಬೆನ್ನಲ್ಲೇ ಈ ಹತ್ಯೆ ಘಟನೆ ನಡೆದಿರುವುದು ಗಮನಾರ್ಹ. ಪ್ರತ್ಯೇಕತಾವಾದಿಗಳೊಂದಿಗೆ ನಿರಂತರ ಸಂಘರ್ಷದಲ್ಲಿ ತೊಡಗುವುದರ ಬದಲು ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವುದು ಒಳ್ಳೆಯದು ಎಂಬುದು ಮುಫ್ತಿಯವರ ವಾದ. ಆದರೆ, ಮಾತುಕತೆಗೆ ಸರಿಯಾದ ವಾತಾವರಣ ನಿರ್ಮಾಣವಾಗಬೇಕಾದರೆ ಉಗ್ರಗಾಮಿಗಳ ಹಿಂಸಾಚಾರ, ಹಾಗೂ ಸೇನಾ ಕಾರ್ಯಾಚರಣೆ ಎರಡೂ ನಿಲ್ಲಬೇಕು ಎಂಬುದು ಮೆಹಬೂಬಾ ಮುಫ್ತಿ ಅಭಿಪ್ರಾಯವಾಗಿದೆ.