ಪ್ರಧಾನಿ ನರೇಂದ್ರ ಮೋದಿ ಮಾಸ್ಟರ್ ಸ್ಟ್ರೋಕ್ ಬೆನ್ನಲ್ಲೇ ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಆದರೆ ಈ ಬಾರಿ ಅಧಿವೇಶನ ಸುಗಮವಾಗಿ ನಡೆಯುತ್ತದಾ ಎನ್ನುವುದು ಅನುಮಾನ. ಯಾಕೆಂದರೆ ನೋಟು ರದ್ಧತಿಯನ್ನೇ ಬ್ರಹ್ಮಾಸ್ತ್ರವನ್ನಾಗಿ ಮಾಡಿ, ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ನವದೆಹಲಿ(ನ.16): ಪ್ರಧಾನಿ ನರೇಂದ್ರ ಮೋದಿ ಮಾಸ್ಟರ್ ಸ್ಟ್ರೋಕ್ ಬೆನ್ನಲ್ಲೇ ಇಂದಿನಿಂದ ಸಂಸತ್ ಚಳಿಗಾಲದ ಅಧಿವೇಶನ ಆರಂಭವಾಗಲಿದೆ. ಆದರೆ ಈ ಬಾರಿ ಅಧಿವೇಶನ ಸುಗಮವಾಗಿ ನಡೆಯುತ್ತದಾ ಎನ್ನುವುದು ಅನುಮಾನ. ಯಾಕೆಂದರೆ ನೋಟು ರದ್ಧತಿಯನ್ನೇ ಬ್ರಹ್ಮಾಸ್ತ್ರವನ್ನಾಗಿ ಮಾಡಿ, ಅಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ಸಜ್ಜಾಗಿವೆ.
ಇಂದಿನಿಂದ ಒಂದು ತಿಂಗಳ ಕಾಲ ಸಂಸತ್ ಚಳಿಗಾಲದ ಅಧಿವೇಶನ ನಡೆಯಲಿದೆ. ಈ ವೇಳೆ ಕೇಂದ್ರ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳು ರಣತಂತ್ರ ರೂಪಿಸಿವೆ. ನೋಟ್ ಬ್ಯಾನ್ ನಿಂದ ಜನಸಾಮಾನ್ಯರು ಪರದಾಡುತ್ತಿರುವುದನ್ನೇ ಬಂಡವಾಳ ಮಾಡಿಕೊಂಡು, ಕೇಂದ್ರ ಸರ್ಕಾರದ ಮೇಲೆ ಮುಗಿಬೀಳಲು ಸಕಲ ರೀತಿಯಲ್ಲೂ ಸಜ್ಜಾಗಿವೆ.
ಸರ್ವಪಕ್ಷ ಸಭೆ ಕರೆದಿದ್ದ ಪ್ರಧಾನಿ ಮೋದಿ
ಇನ್ನೂ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಸರ್ವ ಪಕ್ಷ ಸಭೆ ಕರೆದು, ರಾಷ್ಟ್ರದ ಹಿತಾಸಕ್ತಿಯಿಂದ ಕಪ್ಪು ಹಣ ಮತ್ತು ಭ್ರಷ್ಟಾಚಾರದ ವಿರುದ್ಧ ಕ್ರಮಗಳಿಗೆ ಸಹಕರಿಸಬೇಕು, ಸುಗಮ ಕಲಾಪಕ್ಕೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದ್ರು. ಸಭೆ ಬಳಿಕ ಮಾತನಾಡಿದ ಸಚಿವ ಅನಂತ್‌ಕುಮಾರ್, ನೋಟ್ ರದ್ದತಿ, ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಸೇರಿದಂತೆ ಪ್ರತಿಯೊಂದು ವಿಷಯಗಳ ಚರ್ಚೆಗೂ ಸರ್ಕಾರ ಸಿದ್ದವಿದೆ ಎಂದು ಹೇಳಿದರು.
ಸಿದ್ಧತೆಯಿಲ್ಲದೇ ನೋಟ್ ಚಲಾವಣೆ ರದ್ದು ಮಾಡಿರುವ ನಿರ್ಧಾರ ಖಂಡಿಸಿ ಮೋದಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ. ಇಂದು ಮಧ್ಯಾಹ್ನ 1.30ಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಧ್ಯಕ್ಷತೆಯಲ್ಲಿ ವಿಪಕ್ಷಗಳ ನಾಯಕರು ರಾಷ್ಟ್ರಪತಿ ಭವನಕ್ಕೆ ಮಾರ್ಚ್ ಮಾಡಲಿದ್ದಾರೆ. ರಾಹುಲ್ ಗಾಂಧಿ, ನಿತೀಶ್ ಕುಮಾರ್, ನವೀನ್ ಪಟ್ನಾಯಕ್, ಮುಲಾಯಂ ಸಿಂಗ್ ಯಾದವ್, ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಈಗಾಗಲೇ ಚರ್ಚಿಸಿದ್ದು, ಟಿಎಂಸಿ ಪಕ್ಷಧ 40 ಸಂಸದರೊಂದಿಗೆ ರಾಷ್ಟ್ರಪತಿಯವರನ್ನು ಭೇಟಿ ಮಾಡುವುದಾಗಿ ಮಮತಾ ಬ್ಯಾನರ್ಜಿ ತಿಳಿಸಿದ್ದಾರೆ.
ಒಟ್ಟಿನಲ್ಲಿ ನೋಟ್ ಬ್ಯಾನ್ ಜೊತೆಗೆ, ಮುಂಗಾರು ವೈಫಲ್ಯ, ಕಬ್ಬು ಬೆಳೆಗಾರರ ಸಮಸ್ಯೆ, ಜೆಎನ್‌ಯು ವಿದ್ಯಾರ್ಥಿ ಅಪಹರಣ ಸೇರಿದಂತೆ ಅನೇಕ ವಿಷಯಗಳು ಅಧಿವೇಶನದಲ್ಲಿ ಚರ್ಚೆಗೆ ಬರುವ ಸಾಧ್ಯತೆಗಳಿವೆ. ಆದ್ರೆ ಸುಗಮ ಕಲಾಪಕ್ಕೆ ಪ್ರತಿಪಕ್ಷಗಳು ಅವಕಾಶ ಮಾಡಿಕೊಡುತ್ತವ ಕಾದು ನೋಡಬೇಕು.
