ನವದೆಹಲಿ[ಜೂ.15]: 1991ರಿಂದಲೂ ಸತತವಾಗಿ ರಾಜ್ಯಸಭೆಗೆ ಆಯ್ಕೆಯಾಗುತ್ತಲೇ ಬರುತ್ತಿದ್ದ ಕಾಂಗ್ರೆಸ್‌ನ ಹಿರಿಯ ನಾಯಕ ಮತ್ತು ಮಾಜಿ ಪ್ರಧಾನಿ ಮನಮೋಹನ್‌ಸಿಂಗ್‌ ಗುರುವಾರ ರಾಜ್ಯಸಭೆಯಿಂದ ನಿವೃತ್ತಿ ಹೊಂದಿದರು. ಈ ಮೂಲಕ ಕಳೆದ ಮೂರು ದಶಕಗಳಲ್ಲಿ ಅವರು ಇದೇ ಮೊದಲ ಬಾರಿಗೆ ಮಾಜಿ ಸಂಸದ ಎನ್ನಿಸಿಕೊಳ್ಳುವಂತಾಗಿದೆ. ಇದರಿಂದಾಗಿ ಸತತ 2ನೇ ಬಾರಿ ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಕಾಂಗ್ರೆಸ್‌, ಇದೀಗ ಎರಡು ಬಾರಿ ದೇಶವನ್ನು ಮುನ್ನಡೆಸಿದ್ದ ತನ್ನ ನಾಯಕ, ಮಾಜಿ ಪ್ರಧಾನಿಯನ್ನೇ ಸಂಸತ್ತಿಗೆ ಆಯ್ಕೆ ಮಾಡಿ ಕಳುಹಿಸಲಾಗದ ಮುಜುಗರಕ್ಕೆ ಒಳಗಾಗಿದೆ.

ಮನಮೋಹನ್‌ಸಿಂಗ್‌ 1991ರಿಂದ ಅಸ್ಸಾಂನಿಂದ ಸತತ 5ಬಾರಿ ರಾಜ್ಯಸಭೆಗೆ ಆಯ್ಕೆ ಆಗಿದ್ದರು. ಆದರೆ ಈ ಬಾರಿ ಅಸ್ಸಾಂ ವಿಧಾನಸಭೆಯಲ್ಲಿ ಬಿಜೆಪಿ ಮೇಲುಗೈ ಹೊಂದಿರುವ ಕಾರಣ, ಅಲ್ಲಿಂದ ಸಿಂಗ್‌ ರಾಜ್ಯಸಭೆಗೆ ಆಯ್ಕೆಯಾಗುವ ಅವಕಾಶ ಇಲ್ಲ. ಜೊತೆಗೆ ಇನ್ನೆರಡು ತಿಂಗಳು ಯಾವ ರಾಜ್ಯದಿಂದಲೂ ಸಿಂಗ್‌ರನ್ನು ಕಳುಹಿಸಿಕೊಡುವ ಅವಕಾಶ ಕಾಂಗ್ರೆಸ್‌ಗೂ ಇಲ್ಲ.

2019ರ ಜುಲೈನಲ್ಲಿ ತಮಿಳುನಾಡಿನಿಂದ ರಾಜ್ಯಸಭೆಯ 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಈ ಪೈಕಿ 3 ಜನರನ್ನು ಸುಲಭವಾಗಿ ಗೆಲ್ಲಿಸುವ ಅವಕಾಶ ಡಿಎಂಕೆಗೆ ಇದೆ. ಈ ಪೈಕಿ ಒಂದು ಸ್ಥಾನವನ್ನು ಡಿಎಂಕೆ, ಕಾಂಗ್ರೆಸ್‌ಗೆ ಬಿಟ್ಟುಕೊಡಲು ನಿರ್ಧರಿಸಿದ್ದು, ಅಲ್ಲಿಂದ ಮನಮೋಹನ್‌ಸಿಂಗ್‌ರನ್ನು ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸಲಾಗುವುದು ಎನ್ನಲಾಗಿದೆ.