ಭಾಗಮಂಡಲ ಮತ್ತು ಮಹಾಬಲೇಶ್ವರದಲ್ಲಿ ಪರ್ಜನ್ಯ ಹೋಮ ಮಾಡುವ ನಿರ್ಧಾರವನ್ನು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ಇದು ಇಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಕೆರೆ ತುಂಬಿದಾಗ ಬಾಗಿನ ಅರ್ಪಿಸುವ ರೀತಿಯಲ್ಲೇ ಇದೂ ಕೂಡ ಸಂಪ್ರದಾಯವಾಗಿದೆ. ಸಿಎಂ ಜೊತೆ ಚರ್ಚಿಸಿಯೇ ಈ ನಿರ್ಧಾರ ಕೈಗೊಂಡಿರುವುದಾಗಿ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಬೆಂಗಳೂರು(ಜೂನ್ 01): ಮೌಢ್ಯ ಪ್ರತಿಬಂಧಕ ಕಾನೂನನ್ನು ಜಾರಿಗೆ ತಂದಿರುವ ರಾಜ್ಯ ಸರಕಾರ ಇದೀಗ ಮಳೆಗಾಗಿ ಹೋಮ ಹವನ ನಡೆಸುವ ಮೂಲಕ ಟೀಕೆ ಗುರಿಯಾಗಿದೆ. ಭಾಗಮಂಡಲ ಮತ್ತು ಮಹಾಬಲೇಶ್ವರದಲ್ಲಿ ಕರ್ನಾಟಕ ನೀರಾವರಿ ನಿಗಮವು ಪರ್ಜನ್ಯ ಹೋಮ ಆಯೋಜಿಸಿದೆ. ಕೇರಳ ಪಂಡಿತರನ್ನು ಕರೆಸಿ 20 ಲಕ್ಷ ರೂ ಖರ್ಚು ಮಾಡಿ ಹೋಡಿಸಲು ನಿರ್ಧರಿಸಿದೆ. ಮೂಢನಂಬಿಕೆ ವಿರುದ್ಧ ಸಮರ ಸಾರಿರುವ ಸಿಎಂ ಸಿದ್ದರಾಮಯ್ಯ ಈಗ ಹೋಮದಿಂದ ಮಳೆ ಬರಿಸಲು ಯತ್ನಿಸುತ್ತಿದ್ದಾರೆಂದು ಆಕ್ಷೇಪಗಳು ವ್ಯಕ್ತವಾಗಿವೆ.

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಇಂಥ ಪೂಜೆಗಳು ಬಹಳಷ್ಟು ನಡೆಯುತ್ತಿದ್ದವು. ಆಗ ವಿಪಕ್ಷ ನಾಯಕರಾಗಿದ್ದ ಇದೇ ಸಿದ್ದರಾಮಯ್ಯನವರು ಈ ಪೂಜೆಗಳ ವಿರುದ್ಧ ದೊಡ್ಡ ಟೀಕೆಗಳನ್ನು ಮಾಡುತ್ತಿದ್ದರು. ಈಗ ಅವರು ಸಿಎಂ ಸ್ಥಾನದಲ್ಲಿರುವ ಸಿದ್ದರಾಮಯ್ಯನವರ ನಿಲುವು ಹೇಗೆ ಬದಲಾಯಿತು? ಇದು ಸಿಎಂ ಅವರ ಇಬ್ಬಗೆ ಧೋರಣೆಯನ್ನು ತೋರಿಸುತ್ತಿದೆ ಎಂಬ ಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಪರ್ಜನ್ಯ ಹೋಮ ಮಾಡುವ ನಿರ್ಧಾರವನ್ನು ಮೂರ್ಖತನದ್ದು ಎಂದು ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಬಣ್ಣಿಸಿದ್ದಾರೆ. ಸುವರ್ಣನ್ಯೂಸ್ ಜೊತೆ ಮಾತನಾಡಿದ ರೈತ ಮುಖಂಡರು, ಯಾವ ಹೋಮವೂ ಮಳೆಯನ್ನು ಬರಿಸುವುದಿಲ್ಲ. ಸಿದ್ದರಾಮಯ್ಯನವರು ಜನರಿಗೆ ಮಂಕುಬೂದಿ ಎರಚುವುದು ಬಿಡಬೇಕು. ಪರ್ಜನ್ಯ ಹೋಮದ ನಿರ್ಧಾರ ಕೈಬಿಟ್ಟು ರೈತರ ಪರ ಯೋಜನೆಗಳನ್ನು ಕೈಗೊಳ್ಳಲಿ ಎಂದು ತಿಳಿಸಿದ್ದಾರೆ.

ಎಂಬಿ ಪಾಟೀಲ್ ಸ್ಪಷ್ಟನೆ:
ಭಾಗಮಂಡಲ ಮತ್ತು ಮಹಾಬಲೇಶ್ವರದಲ್ಲಿ ಪರ್ಜನ್ಯ ಹೋಮ ಮಾಡುವ ನಿರ್ಧಾರವನ್ನು ನೀರಾವರಿ ಸಚಿವ ಎಂ.ಬಿ.ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. ಇದು ಇಲ್ಲಿ ಪ್ರತೀ ವರ್ಷ ಆಚರಿಸಿಕೊಂಡು ಬಂದಿರುವ ಸಂಪ್ರದಾಯವಾಗಿದೆ. ಇದರಲ್ಲಿ ಯಾವ ತಪ್ಪೂ ಇಲ್ಲ. ಕೆರೆ ತುಂಬಿದಾಗ ಬಾಗಿನ ಅರ್ಪಿಸುವ ರೀತಿಯಲ್ಲೇ ಇದೂ ಕೂಡ ಸಂಪ್ರದಾಯವಾಗಿದೆ. ಸಿಎಂ ಜೊತೆ ಚರ್ಚಿಸಿಯೇ ಈ ನಿರ್ಧಾರ ಕೈಗೊಂಡಿರುವುದಾಗಿ ಎಂಬಿ ಪಾಟೀಲ್ ಸ್ಪಷ್ಟನೆ ನೀಡಿದ್ದಾರೆ.

ಸಿಎಂ ಒಪ್ಪಿಗೆ ಇಲ್ಲವಾ?
ಸಿಎಂ ಒಪ್ಪಿಗೆ ಪಡೆದೇ ಪರ್ಜನ್ಯ ಹೋಮ ಕೈಗೊಳ್ಳಲಾಗುತ್ತಿದೆ ಎಂದು ನೀರಾವರಿ ಸಚಿವರು ಒಂದೆಡೆ ಹೇಳಿದ್ದರೆ, ಸಿದ್ದರಾಮಯ್ಯನವರು ಹೇಳೋದೇ ಬೇರೆ. ಹೋಮದಿಂದ ಮಳೆ ಬರೊಲ್ಲ. ತಾನು ಯಾವುದೇ ಪೂಜೇ ಮಾಡಿಲ್ಲ. ಮಾಡೋದೂ ಇಲ್ಲ ಎಂದು ಮುಖ್ಯಮಂತ್ರಿಗಳು ಮೈಸೂರಿನಲ್ಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸಿಎಂ ಧ್ವಂಧ್ವ ನಿಲುವು?
ಸಿಎಂ ಸಿದ್ದರಾಮಯ್ಯನವರ ನಿಲುವನ್ನು ಧರ್ಮಶಾಸ್ತ್ರಜ್ಞ ಹರೀಶ್ ಕಶ್ಯಪ್ ಖಂಡಿಸಿದ್ದಾರೆ. ಪರ್ಜನ್ಯ ಹೋಮ ನಡೆಸುತ್ತಿರುವುದು ಪ್ರಯೋಗವಲ್ಲ. ಬದಲಾಗಿ ಅದರು ಪಾರಂಪರಿಕವಾಗಿ ಬಂದ ಶಾಸ್ತ್ರವಾಗಿದೆ. ಶ್ರದ್ಧೆ ಇಲ್ಲದೆ ಏನು ಮಾಡಿದರೂ ಯಾವುದೇ ಫಲ ಸಿಕ್ಕೋದಿಲ್ಲ. ಪರ್ಜನ್ಯ ಹೋಮ ಎಂಬುದು ಮೂಢನಂಬಿಕೆಯಲ್ಲ. ಇವರು ಮೋಡ ಬಿತ್ತನೆ ಮಾಡಲು ಹೊರಟಿರುವುದು ಮೂಢನಂಬಿಕೆ ಎಂದು ಹರೀಶ್ ಕಶ್ಯಪ್ ಅಭಿಪ್ರಾಯಪಟ್ಟಿದ್ದಾರೆ.