ನಿನ್ನೆ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಅಸಮಾಧಾನದ ಹೊಗೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮೌನಕ್ಕೆ ಶರಣಾಗಿದ್ದಾರೆ.
ಬೆಂಗಳೂರು (ಸೆ.01): ನಿನ್ನೆ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ಅಸಮಾಧಾನದ ಹೊಗೆ ಜೋರಾಗಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಮುನಿಸಿಕೊಂಡಿರುವ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಮೌನಕ್ಕೆ ಶರಣಾಗಿದ್ದಾರೆ.
ನಿನ್ನೆ ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಗೈರು ಹಾಜರಾಗಿರುವ ಪರಮೇಶ್ವರ್, ಕೆಪಿಸಿಸಿ ಕಚೇರಿಗೂ ಹೋಗದೇ, ನಿವಾಸದಿಂದ ಹೊರಗೂ ಬರದೇ ಮೌನ ವಹಿಸಿದ್ದಾರೆ. ಮನೆ ಮನೆಗೆ ಕಾಂಗ್ರೆಸ್ ನಡಿಗೆ ಹೆಸರಲ್ಲಿ ಪಕ್ಷ ಸಂಘಟನೆ ಮಾಡೋದು ನಾವು. ಆದ್ರೆ ಸರ್ಕಾರದ ನಿರ್ಧಾರಗಳಲ್ಲಿ ಪಕ್ಷವನ್ನು ಪರಿಗಣಿಸಲ್ಲ ಅಂದ್ರೆ ಹೇಗೆ? ಸಮನ್ವಯ ಸಮಿತಿಯ ಗಮನಕ್ಕೂ ತರದೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಅಂತ ಪರಮೇಶ್ವರ್ ಗರಂ ಆಗಿದ್ದಾರೆ. ಅಸಮಧಾನದ ಬಗ್ಗೆ ಪರಮೇಶ್ವರ್ ತಮ್ಮ ಅತ್ಯಾಪ್ತರ ಹತ್ತಿರ ಹೇಳಿಕೊಂಡಿದ್ದಾರೆ ಎಂಬ ಎಕ್ಸ್ಕ್ಲೂಸಿವ್ ಅಂಶಗಳು ಸುವರ್ಣ ನ್ಯೂಸ್ಗೆ ಲಭ್ಯವಾಗಿವೆ.
ಸಿದ್ದರಾಮಯ್ಯರಿಂದ ಮೂಲ ಕಾಂಗ್ರೆಸ್ಸಿಗರ ಕಡೆಗಣನೆಗೆ ಪರಮೇಶ್ವರ್ ಬೇಸರ ವ್ಯಕ್ತಪಡಿಸಿದ್ದಾರೆ. ಸಿಎಂ ಹೀಗೆ ಮುಂದುವರೆದರೆ ಮೂಲ ಕಾಂಗ್ರೆಸ್ಸಿಗರಿಗೆ ಉತ್ತರಿಸೋದು ಹೇಗೆ? ಪಕ್ಷದ ಅಧ್ಯಕ್ಷರ ಜೊತೆ ಯಾವುದೇ ವಿಚಾರಗಳ ಬಗ್ಗೆ ಚರ್ಚೆ ಮಾಡಲ್ಲ ಅಂದ್ರೆ ಹೇಗೆ? ಪಕ್ಷ ಮತ್ತು ಸರ್ಕಾರದ ನಡುವೆ ಹೊಂದಾಣಿಕೆಗೆ ಸಮನ್ವಯ ಸಮಿತಿ ಕೂಡಾ ಇದೆ. ಸಮನ್ವಯ ಸಮಿತಿಯ ಗಮನಕ್ಕೂ ತರದೆ ಸಿಎಂ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ ಎಂದು ಸಿಎಂ ನಡೆಯ ಬಗ್ಗೆ ಆಪ್ತರ ಬಳಿ ಪರಮೇಶ್ವರ್ ಅಸಮಾಧಾನ ತೋಡಿಕೊಂಡಿದ್ದಾರೆ.
