ಲಕ್ನೋ[ಜು.11]: ಭಾರತೀಯ ಜನತಾ ಪಕ್ಷದ ಶಾಸಕರೊಬ್ಬರ ಮಗಳು, ತನಗೆ ಹಾಗೂ ತನ್ನ ಗಂಡನಿಗೆ ಜೀವ ಬೆದರಿಕೆ ಇದೆ. ದಯವಿಟ್ಟು ರಕ್ಷಣೆ ಒದಗಿಸಿ ಎಂದು ಪೊಲೀಸರಿಗೆ ಮೊರೆ ಇಟ್ಟಿದ್ದಾಳೆ. 

ಬರೇಲಿ ಜಿಲ್ಲೆಯ ಬಿತಿರೀ ಚೈನ್ ಪುರ್ ಕ್ಷೇತ್ರದ ಶಾಸಕ ರಾಜೇಶ್ ಮಿಶ್ರಾ ಮಗಳು ಸಾಕ್ಷಿ ದಲಿತ ಯುವಕ ಅಜಿತೇಶ್ ಕುಮರ್ ಜೊತೆ ವೈಧಿಕ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದಾಳೆ. ಬಳಿಕ ಮದುವೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಿದ್ದಾಳೆ. ಆದರೆ ಇದರ ಬರನ್ನಲ್ಲೇ ಮತ್ತೊಂದು ವಿಡಿಯೋ ಶೇರ್ ಮಾಡಿಕೊಂಡಿರುವ ಸಾಕ್ಷಿ ಬರೇಲಿಯ ಹಿರಿಯ ಪೊಲೀಸ್ ಅಧೀಕ್ಷಕರಲ್ಲಿ ತನ್ನನ್ನು ಹಾಗೂ ಗಂಡನನ್ನು ತನ್ನ ತಂದೆ ಹಾಗೂ ಬರೇಲಿ ಶಾಸಕ ರಾಜೇಶ್ ಮಿಶ್ರಾ, ಸಹೋದರ ವಿಕ್ಕಿ ಹಾಗೂ ತಂದೆಯ ಓರ್ವ ಮಿತ್ರನಿಂದ ಜೀವ ಬೆದರಿಕೆ ಇದೆ. ಹೀಗಾಗಿ ರಕ್ಷಣೆ ಒದಗಿಸಿ ಎಂದು ಮನವಿ ಮಾಡಿಕೊಂಡಿದ್ದಾಳೆ.

ಇವರೆಲ್ಲರೂ ಸೇರಿ ತಮ್ಮನ್ನು ಕೊಲ್ಲಲು ಯತ್ನಿಸುತ್ತಿದ್ದಾರೆಂದು ಆರೋಪಿಸಿರುವ ಸಾಕ್ಷಿ, ಬರೇಲಿಯ ಎಲ್ಲಾ ಸಚಿವರು ಹಾಗೂ ಅಧಿಕರಿಗಳ ಬಳಿ ತನ್ನ ತಂದೆ ಹಾಗೂ ಸಹೋದರನಿಗೆ ಯಾವುದೇ ಸಹಾಯ ಮಾಡದಂತೆ ಬೇಡಿಕೊಂಡಿದ್ದಾಳೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬರೇಲಿಯ ಡಿಐಜಿ ಸಾಕ್ಷಿ ಮಿಶ್ರಾ ದಲಿತ ಯುವಕನನ್ನು ಮದುವೆಯಾಗಿರುವ ವಿಚಾರ ನಮ್ಮ ಗಮನಕ್ಕೆ ಬಂದಿದೆ. ಈಕೆ ಭದ್ರತೆ ಒದಗಿಸುವಂತೆ ಕೇಳಿಕೊಂಡಿದ್ದಾಳೆ. ಹೀಗಾಗಿ ಇವರಿಗೆ ಭದ್ರತೆ ಒದಗಿಸಲು ಸೂಚಿಸಿದ್ದೇನೆ. ಆದರೆ ತಾವೆಲ್ಲಿದ್ದೇವೆ ಎಂಬ ಕುರಿತಾಗಿ ಅವರು ಮಾಹಿತಿ ನೀಡಿಲ್ಲ. ಹೀಗಾಗಿ ಭದ್ರತೆ ಹೇಗೆ ಒಗಿಸುವುದು ಎಂದು ತಿಳಿಯುತ್ತಿಲ್ಲ. ಈ ದಂಪತಿಯನ್ನು ಹುಡುಕಾಡುವ ಪ್ರಯತ್ನ ಮಾಡುತ್ತಿದ್ದೇವೆ ಎಂದಿದ್ದಾರೆ.

ಸಾಕ್ಷಿ ವೈರಲ್ ಮಾಡಿರುವ ವಿಡಿಯೋದಲ್ಲಿ ತನ್ನ ತಂದೆಯ ಬಳಿಯೂ ಮನವಿಯೊಂದನ್ನು ಮಾಡಿದ್ದು, ದಯವಿಟ್ಟು 'ನಮ್ಮನ್ನು ನಮ್ಮ ಪಾಡಿಗೆ ಬದುಕಲು ಬಿಡಿ ಹಾಗೂ ನೀವು ಆರಾಮಾಗಿ ರಾಜಕೀಯದಲ್ಲಿ ತೊಡಗಿಕೊಳ್ಳಿ' ಎಂದಿದ್ದಾಳೆ.