ಮುಖ್ಯಮಂತ್ರಿ ಪರ್ರಿಕರ್ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಪುತ್ರಗೆ ಬಿಜೆಪಿ ಟಿಕೆಟ್ ನಿರಾಕರಿಸಲಾಗಿದೆ. 

ಪಣಜಿ: ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ ಪರ್ರಿಕರ್‌ ನಿಧನದಿಂದ ತೆರವಾಗಿರುವ ಪಣಜಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಪರ್ರಿಕರ್‌ ಅವರ ಹಿರಿಯ ಪುತ್ರ ಉತ್ಪಲ್‌ಗೆ ಬಿಜೆಪಿ ಹೈಕಮಾಂಡ್‌ ಟಿಕೆಟ್‌ ನಿರಾಕರಿಸಿದೆ. ಅವರ ಬದಲು ಪರ್ರಿಕರ್‌ಗಾಗಿ ಈ ಹಿಂದೆ ಶಾಸಕ ಸ್ಥಾನ ತ್ಯಜಿಸಿದ್ದ ಮಾಜಿ ಶಾಸಕ ಸಿದ್ಧಾರ್ಥ್ ಕುಂಕೋಲಿಯೆಂಕರ್‌ ಹೆಸರನ್ನು ಪಕ್ಷದ ಕೇಂದ್ರ ನಾಯಕರು ಅಂತಿಮಗೊಳಿಸಿದ್ದಾರೆ.

ಅನುಕಂಪದ ಆಧಾರದಲ್ಲಿ ಪರ್ರಿಕರ್‌ ಪುತ್ರಗೆ ಟಿಕೆಟ್‌ ನೀಡಬಹುದು ಎಂಬ ಮಾತುಗಳು ಕೇಳಿಬಂದಿದ್ದವಾದರೂ, ಅಂಥ ಬೇಡಿಕೆಗೆ ಬಿಜೆಪಿ ಹೈಕಮಾಂಡ್‌ ಮಣೆ ಹಾಕಿಲ್ಲ. ಕೇಂದ್ರದ ಮಾಜಿ ಸಚಿವ ಅನಂತ್‌ಕುಮಾರ್‌ ಅವರು ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಅನಂತ್‌ ಪತ್ನಿಗೆ ಟಿಕೆಟ್‌ ನಿರಾಕರಿಸಿದ್ದ ಕಮಲ ಪಕ್ಷದ ಹಿರಿಯ ನಾಯಕರು ಇದೇ ನೀತಿಯನ್ನು ಗೋವಾದಲ್ಲೂ ಜಾರಿಗೊಲಿಸಿದ್ದಾರೆ.

ಗೋವಾ ರಾಜ್ಯ ಬಿಜೆಪಿ ಘಟಕವು ಉತ್ಪಲ್‌ ಮತ್ತು ಸಿದ್ಧಾರ್ಥ್ ಹೆಸರನ್ನು ಕೇಂದ್ರ ನಾಯಕತ್ವಕ್ಕೆ ಶಿಫಾರಸು ಮಾಡಿತ್ತು. ಈ ಪೈಕಿ ಒಬ್ಬರನ್ನು ಆಯ್ಕೆ ಮಾಡುವ ಹೊಣೆಯನ್ನು ಬಿಜೆಪಿ ಸಂಸದೀಯ ಮಂಡಳಿ ಸಭೆಯ ವಿವೇಚನೆಗೆ ಬಿಟ್ಟಿತ್ತು.