ಇಸ್ಲಾಮಾಬಾದ್(ಆ.17): ಭಾರತ ಕಂಡರೆ ಉರಿದು ಬೀಳುವ ನೆಲ ಪಾಕಿಸ್ತಾನ. ಭಾರತದ ಜೊತೆ ಕೇವಲ ಹೊಡಿ, ಬಡಿ, ಕಡಿ ಮಾತುಗಳನ್ನೇ ಆಡುತ್ತಿದ್ದ ಪಾಕಿಸ್ತಾನಕ್ಕೆ ಸ್ನೇಹದ ಭಾಷೆ ಕಲಿಸಿದ್ದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ. 

ಅಟಲ್ ಮಾತು ಆಲಿಸಿದ ಮೇಲೆಯೇ ಪಾಕಿಸ್ತಾನಕ್ಕೆ ಸ್ನೇಹದ ಮಹತ್ವ ಅರಿವಾಗಿದ್ದು. ಹೌದು ಭಾರತದ ಜೊತೆ ಸ್ನೇಹದಿಂದಲೂ ಇರಬಹುದು ಎಂಬುದನ್ನು ಮನಗಂಡ ಪಾಕಿಸ್ತಾನ ಐತಿಹಾಸಿಕ ಲಾಹೋರ್ ಮತ್ತು ಶಿಮ್ಲಾ ಒಪ್ಪಂದಕ್ಕೆ ಮುಂದಾಗಿದ್ದು.

ತಮಗೆ ಪ್ರೀತಿಯ, ಸ್ನೇಹದ, ಭಾಂಧವ್ಯದ ಭಾಷೆ ಕಲಿಸಿದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರನ್ನು ಪಾಕಿಸ್ತಾನದ ಮಾಧ್ಯಮಗಳು ಕೂಡ ನೆನೆದು ಕಣ್ಣೀರಿಟ್ಟಿವೆ.

ಪಾಕಿಸ್ತಾನದ ಪ್ರಮುಖ ಪತ್ರಿಕೆಗಳಾದ ಡಾನ್, ಟ್ರಿಬ್ಯೂನ್ ಸೇರಿದಂತೆ ಬಹುತೇಕ ಪತ್ರಿಕೆಗಳು ವಾಜಪೇಯಿ ನಿಧನದ ಸುದ್ದಿಯನ್ನು ಪ್ರಕಟಿಸಿವೆ. ವಾಜಪೇಯಿ ಅವರನ್ನು ಶಾಂತಿಧೂತ ಎಂದು ಡಾನ್ ಪತ್ರಿಕೆ ಶಿರ್ಷಿಕೆ ನೀಡಿದೆ.

ಇದೇ ವೇಳೆ ವಾಜಪೇಯಿ ಅಂತ್ಯಕ್ರಿಯೆಯಲ್ಲಿ ಪಾಕ್ ಕಾನೂನು ಸಚಿವ ಅಲಿ ಜಾಫರ್ ನೇತೃತ್ವದ ನಿಯೋಗ ಭಾಗವಹಿಸಲಿದ್ದು, ಉಭಯ ರಾಷ್ಟ್ರಗಳ ನಡುವೆ ಶಾಂತಿ ಸ್ಥಾಪನೆಗೆ ದುಡಿದ ಮಹಾನ್ ನಾಯಕನಿಗೆ ಗೌರವ ಸಲ್ಲಿಸಿದೆ. ಅಲ್ಲದೇ ವಾಜಪೇಯಿ ಅಂತ್ಯಕ್ರಿಯೆಯಲ್ಲಿ ಶ್ರೀಲಂಕಾ, ಬಾಂಗ್ಲಾದೇಶ, ಭೂತಾನ್ ನಿಯೋಗ ಕೂಡ ಭಾಗವಹಿಸುತ್ತಿವೆ ಎಂದು ಮೂಲಗಳು ತಿಳಿಸಿವೆ.