ಲಾಹೋರ್‌[ಜೂ.11]: ಕಿರ್ಗಿಸ್ತಾನದ ರಾಜಧಾನಿ ಬಿಷ್ಕೇಕ್‌ನಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ ಶೃಂಗಕ್ಕೆ ತೆರಳಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನವು ತನ್ನ ವಾಯು ನೆಲೆ ಮೂಲಕ ಹಾದು ಹೋಗಲು ಪಾಕಿಸ್ತಾನ ಅನುಮತಿ ನೀಡಿದೆ.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತೀಯ ವಾಯುಪಡೆಯು ಪಾಕಿಸ್ತಾನದ ಬಾಲಾಕೋಟ್‌ಗೆ ನುಗ್ಗಿ ಅಲ್ಲಿ ನೆಲೆಸಿದ್ದ ಜೈಷ್‌-ಎ-ಮೊಹಮ್ಮದ್‌ ಉಗ್ರರನ್ನು ಸಂಹಾರ ಮಾಡಿತ್ತು. ಇದರಿಂದ ಕ್ರೋಧಗೊಂಡಿದ್ದ ಪಾಕಿಸ್ತಾನ, ಫೆ.26ರಿಂದ ತನ್ನ ವಾಯುನೆಲೆಗೆ ಭಾರತದ ಯಾವುದೇ ವಿಮಾನಗಳು ಪ್ರವೇಶಿಸದಂತೆ ನಿರ್ಬಂಧ ಹೇರಿದೆ.

ಆದಾಗ್ಯೂ, ಜೂ.13-14ರವರೆಗೆ ಕಿರ್ಗಿಸ್ತಾನದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆ ಶೃಂಗಕ್ಕೆ ತೆರಳುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿಮಾನ ಪ್ರವೇಶಕ್ಕೆ ಅನುಮತಿ ನೀಡುವಂತೆ ಕೋರಿದ ಭಾರತದ ಮನವಿಯನ್ನು ಪಾಕಿಸ್ತಾನ ಪುರಸ್ಕರಿಸಿದೆ. ಈ ಮೂಲಕ ಭಾರತದ ಜೊತೆ ಶಾಂತಿ ಮಾತುಕತೆಗೆ ಸಿದ್ಧ ಎಂಬ ಸಂದೇಶವನ್ನು ರವಾನಿಸಲು ಪಾಕಿಸ್ತಾನ ಯತ್ನಿಸುತ್ತಿದೆ.