ವಾಷಿಂಗ್ಟನ್‌[ಅ.03]: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ಭಾರತ ರದ್ದುಗೊಳಿಸಿದ ಹಿನ್ನೆಲೆಯಲ್ಲಿ ಆಕ್ರೋಶದಿಂದ ಕುದಿಯುತ್ತಿರುವ ಪಾಕಿಸ್ತಾನದ ಉಗ್ರರು ಭಾರತದ ಮೇಲೆ ದಾಳಿ ನಡೆಸಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ಪಾಕಿಸ್ತಾನ ಏನಾದರೂ ನಿಯಂತ್ರಿಸದೇ ಹೋದರೆ ಕಾಶ್ಮೀರ ವಿಚಾರವಾಗಿ ಆಕ್ರೋಶಗೊಂಡಿರುವ ಉಗ್ರಗಾಮಿ ಸಂಘಟನೆಗಳು ಗಡಿಯಾಚೆಯ ಚಟುವಟಿಕೆಗಳನ್ನು ನಡೆಸಬಹುದು ಎಂಬ ಆತಂಕ ಹಲವು ದೇಶಗಳಿಗೆ ಇದೆ. ಆದರೆ, ಚೀನಾ ಅಂತಹ ಬಿಕ್ಕಟ್ಟನ್ನು ಬಯಸುತ್ತದೆ ಅಥವಾ ಬೆಂಬಲಿಸುತ್ತದೆ ಎಂದು ಅನ್ನಿಸುವುದಿಲ್ಲ ಎಂದು ಅಮೆರಿಕದ ರಕ್ಷಣಾ ಖಾತೆ ಸಹಾಯಕ ಸಚಿವ ರಾಂಡಾಲ್‌ ಶ್ರಿವರ್‌ ಅವರು ತಿಳಿಸಿದ್ದಾರೆ.

ಕಾಶ್ಮೀರ ವಿಚಾರವಾಗಿ ಪಾಕಿಸ್ತಾನದ ಬೆಂಬಲಕ್ಕೆ ಚೀನಾ ಏನಾದರೂ ನಿಲ್ಲುತ್ತದೆಯೇ ಎಂಬ ಪ್ರಶ್ನೆಗೆ, ಬಹುತೇಕ ರಾಜತಾಂತ್ರಿಕ ಹಾಗೂ ರಾಜಕೀಯ ಬೆಂಬಲ ನೀಡಬಹುದು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನವನ್ನು ಚೀನಾ ಸಮರ್ಥಿಸಿಕೊಂಡಿದೆ. ಅದರಿಂದಾಚೆಗೆ ಬೇರೇನೂ ಇದ್ದಂತೆ ಇಲ್ಲ ಎಂದು ಅವರು ಹೇಳಿದ್ದಾರೆ.