ಡಾಲರ್‌ ವಿರುದ್ಧ ಪಾಕ್‌ ರುಪಾಯಿ ಪಾತಾಳಕ್ಕೆ

ಡಾಲರ್‌ ವಿರುದ್ಧ ಭಾರತದ ರುಪಾಯಿ ದುರ್ಬಲಗೊಂಡು 70 ರು. ಗಡಿ ದಾಟಿದ್ದಕ್ಕೆ ಅಲ್ಲೋಲಕಲ್ಲೋಲವಾಗಿತ್ತು. ಆದರೆ ಪಾಕಿಸ್ತಾನದಲ್ಲಿ ರುಪಾಯಿ ಮೌಲ್ಯ ಪಾತಾಳಕ್ಕೆ ಕುಸಿದಿದ್ದು, ಸಾರ್ವಕಾಲಿಕ ದಾಖಲೆಯ 144 ರು.ಗೆ ಇಳಿಕೆಯಾಗಿದೆ. ಹೀಗಾಗಿ 1 ಡಾಲರ್‌ಗೆ ಪಾಕಿಸ್ತಾನ 144 ರುಪಾಯಿಗಳನ್ನು ಪಾವತಿ ಮಾಡಬೇಕಾಗುತ್ತಿದೆ. ಮಾಜಿ ಕ್ರಿಕೆಟಿಗ ಇಮ್ರಾನ್‌ ನೇತೃತ್ವದ ಸರ್ಕಾರ 100 ದಿನಗಳನ್ನು ಸಮೀಪಿಸುತ್ತಿರುವ ವೇಳೆಗೆ ಸರಿಯಾಗಿ ರುಪಾಯಿ ಶಾಕ್‌ ನೀಡಿದೆ. ಗುರುವಾರ 134 ರು.ಗೆ ಇಳಿದಿದ್ದ ರುಪಾಯಿ, ಶುಕ್ರವಾರ ಒಂದೇ ದಿನ 10 ರು. ಕುಸಿದು 144 ರು.ಗೆ ತಲುಪಿದೆ.

ಅಮೆರಿಕ ನೆರವು ನಿಲ್ಲಿಸಿದ್ದೇ ಪಾಕ್‌ ದಿವಾಳಿಗೆ ಮೂಲ?

ಪಾಕಿಸ್ತಾನ ಉಗ್ರರಿಗೆ ಕುಮ್ಮಕ್ಕು ನೀಡುತ್ತಿದೆ ಎಂಬುದು ಇಡೀ ಜಗತ್ತಿಗೇ ಗೊತ್ತು. ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ‘ಅಮೆರಿಕವು ಪಾಕಿಸ್ತಾನಕ್ಕೆ ಮೂರ್ಖನಂತೆ ಕಳೆದ 15 ವರ್ಷದಿಂದ 3300 ಕೋಟಿ ರು.ಗೂ ಹೆಚ್ಚು ನೆರವು ನೀಡಿತ್ತು. ಆದರೆ ಪಾಕಿಸ್ತಾನವು ನಮಗೆ ಮೋಸ ಮಾಡಿದೆ’ ಎಂದು ವಿದೇಶಿ ನೆರವು ನಿಲ್ಲಿಸುವುದಾಗಿ ಹೇಳಿದ್ದರು. ಅಮೆರಿಕವೇ ನೆರವಿಗೆ ಹಿಂದೇಟು ಹಾಕಿದ್ದರಿಂದ ಜಗತ್ತಿನ ಎಲ್ಲಾ ದೇಶಗಳು ಪಾಕಿಸ್ತಾನಕ್ಕೆ ನೆರವು ಅಥವಾ ಸಾಲ ನೀಡಲು ಹಿಂದುಮುಂದು ನೋಡುತ್ತಿವೆ. ಅಲ್ಲಿಂದಲೇ ಪಾಕ್‌ ದಿವಾಳಿತನ ಆರಂಭವಾಗಿದೆ. ಜೊತೆಗೆ ಭಯೋತ್ಪಾದನೆ ನಿಗ್ರಹ ಅನುದಾನ ವಿಚಾರದಲ್ಲಿ ಪಾಕ್‌ ಜೊತೆ ಅಸಮಾಧಾನ ಏರ್ಪಟ್ಟಿದ್ದರಿಂದ ಅಮೆರಿಕ ತನ್ನ ವಿದೇಶಿ ನೀತಿ ಮಾರ್ಪಡಿಸಿತ್ತು. ಇದರಿಂದಾಗಿ ವಿದೇಶಿ ಹೂಡಿಕೆದಾರರು ಚೀನಾ-ಪಾಕ್‌ ಆರ್ಥಿಕ ಕಾರಿಡಾರ್‌ (ಸಿಪಿಇಸಿ)ನಿಂದ ದೂರ ಸರಿಯುತ್ತಿದ್ದಾರೆ. ಅಮೆರಿಕದಲ್ಲಿ ಬಡ್ಡಿ ದರಗಳು ಏರಿಕೆಯಾಗಿ ಪಾಕಿಸ್ತಾನದಂಥ ರಾಷ್ಟ್ರಗಳ ಮಾರುಕಟ್ಟೆಯ ಮೇಲಿನ ಬಂಡವಾಳ ಹೂಡಿಕೆಯಲ್ಲಿ ಏರುಪೇರು ಉಂಟಾಗಿದೆ. ಪರಿಣಾಮ 2001ರಂತೆ ಪಾಕ್‌ಗೆ ಹಣಕಾಸು ಮುಗ್ಗಟ್ಟು ಎದುರಾಗಲಿದೆ ಎನ್ನಲಾಗುತ್ತಿದೆ.

ಪಾಕ್‌ ಬಳಿ ಈಗಿರುವ ಹಣ 2 ತಿಂಗಳಿಗೂ ಸಾಲದು!

ವರದಿಗಳ ಪ್ರಕಾರ ಪಾಕಿಸ್ತಾನದ ಬಳಿ ಈಗ ಇರುವ ಹಣ ಕೇವಲ 5,580 ಕೋಟಿ ರು. ಮಾತ್ರ. ಈ ಹಣ ಹೆಚ್ಚೆಂದರೆ 2 ತಿಂಗಳು ಸಾಕಾಗಬಹುದು. ಇದು ಬಹುತೇಕ ಆರ್ಥಿಕ ದಿವಾಳಿ ಸ್ಥಿತಿಯೇ. ತಮಾಷೆಯೆಂದರೆ, 1980ರಿಂದೀಚೆಗೆ 12 ಬಾರಿ ಪಾಕ್‌ನ ಆರ್ಥಿಕ ಸ್ಥಿತಿ ಈ ಹಂತಕ್ಕೆ ತಲುಪಿತ್ತು. ಹೀಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾದಾಗಲೆಲ್ಲಾ ನೆರವಿಗೆ ಬಂದಿದ್ದ ಅಂತಾರಾಷ್ಟ್ರೀಯ ಹಣಕಾಸು ನಿಧಿಯ ನೆರವಿಗಾಗಿ ಈ ಬಾರಿಯೂ ಇಮ್ರಾನ್‌ ಖಾನ್‌ ಕೈಚಾಚಿದ್ದರು. ಆದರೆ ಪಾಕಿಸ್ತಾನ ಈಗಾಗಲೇ ಚೀನಾದಿಂದ 60 ಬಿಲಿಯನ್‌ ಡಾಲರ್‌ ಸಾಲ ಪಡೆದಿದೆ. ಹಾಗಾಗಿ ಮತ್ತೊಮ್ಮೆ ಸಾಲ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಅಮೆರಿಕವೂ ಪಾಕ್‌ನ ಕೈಬಿಟ್ಟಿದೆ. ಉಳಿದಿರುವುದು ಮಿತ್ರ ರಾಷ್ಟ್ರ ಚೀನಾ ಮಾತ್ರ. ಆದರೆ ಅಲ್ಲಿಂದಲೂ ಸಾಕಷ್ಟುಸಾಲ ಪಡೆದಿರುವುದರಿಂದ ಪಾಕಿಸ್ತಾನಕ್ಕೆ ಈಗ ಎಲ್ಲಾ ಹಾದಿಗಳೂ ಮುಚ್ಚಿಹೋಗಿವೆ.

ಆಮದು ಹೆಚ್ಚು, ರಫ್ತು ಪಾತಾಳಕ್ಕೆ

2017-18ನೇ ಸಾಲಿನಲ್ಲಿ ಪಾಕಿಸ್ತಾನದ ರಫ್ತು ಮೌಲ್ಯ 14,070 ಕೋಟಿ ರು. ಆದರೆ ಅದೇ ಸಮಯಕ್ಕೆ ಆಮದು ಮೌಲ್ಯ 38,190 ಕೋಟಿ ರು.ಗೆ ಏರಿಕೆಯಾಗಿದೆ. ಇದರಿಂದ ಪಾರಾಗಲು ರಫ್ತಿಗೆ ತೆರಿಗೆ ಹೆಚ್ಚು ಮಾಡಲು ಹೋಗಿ ಅದರಲ್ಲೂ ನಷ್ಟಅನುಭವಿಸಿದೆ. ಪಾಕಿಸ್ತಾನದ ಪ್ರಮುಖ ರಫ್ತು ಸರಕುಗಳೆಂದರೆ ಹತ್ತಿ ಮತ್ತು ಜವಳಿ. ಆಮದು ಸರಕುಗಳು ತೈಲ, ಕಂಪ್ಯೂಟರ್‌ ಹಾಗೂ ಯಂತ್ರೋಪಕಣಗಳು. ಹಾಗಾಗಿ ಸಹಜವಾಗಿ ದೇಶದ ವ್ಯಾಪಾರ ಕೊರತೆಯು 19,430 ಕೋಟಿ ರು.ನಿಂದ 23,450 ಕೋಟಿ ರು.ಗೆ ಏರಿಕೆಯಾಗಿದೆ. ಇದರಿಂದ ಪಾಕ್‌ ಪಾರಾಗುವುದು ಸುಲಭವಿಲ್ಲ.

ಯದ್ವಾತದ್ವಾ ಸಾಲ

ಪಾಕಿಸ್ತಾನದ ಆರ್ಥಿಕ ಮುಗ್ಗಟ್ಟು ಯಾವ ಸ್ಥಿತಿ ತಲುಪಿದೆ ಎಂಬುದಕ್ಕೆ ಆ ದೇಶದ ಸಾರ್ವಜನಿಕ ಸಾಲವೇ ಸಾಕ್ಷಿ. 2017ರಲ್ಲಿ ಪಾಕಿಸ್ತಾನದ ಸಾರ್ವಜನಿಕ ಸಾಲ ದಾಖಲೆ ಮಟ್ಟದಲ್ಲಿ ಏರಿಕೆಯಾಗಿದೆ. 2013ರಲ್ಲಿ 14.3 ಲಕ್ಷ ಕೋಟಿ ರು. ಇದ್ದಿದ್ದು 2017ರಲ್ಲಿ 21.4 ಲಕ್ಷ ಕೋಟಿ ರು.ಗೆ ಏರಿಕೆಯಾಗಿದೆ. 1990ರ ನಂತರ ಸಾಲದ ಪ್ರಮಾಣ ಇಷ್ಟುಗರಿಷ್ಠ ಮಟ್ಟಕ್ಕೆ ತಲುಪಿದ್ದು ಇದೇ ಮೊದಲು. ಅಭಿವೃದ್ಧಿ ಕಾರ್ಯಗಳಿಗಾಗಿ ಚೀನಾದಿಂದ ಅಪಾರ ಪ್ರಮಾಣದ ಸಾಲ ಪಡೆದಿದ್ದೇ ಈ ಸ್ಥಿತಿಗೆ ಮೂಲ ಕಾರಣ ಎನ್ನಲಾಗುತ್ತಿದೆ.

ಚೀನಾ ಜೊತೆ ಕಾರಿಡಾರ್‌ ಮಾಡಲು ಹೋಗಿ ದಿವಾಳಿ?

ಪಾಕಿಸ್ತಾನ ಮತ್ತು ಚೀನಾ ಜಂಟಿಯಾಗಿ ಅಂದಾಜು 41,540 ಕೋಟಿ ರು. ವೆಚ್ಚದಲ್ಲಿ ಚೀನಾ-ಪಾಕ್‌ ಆರ್ಥಿಕ ಕಾರಿಡಾರ್‌ ನಿರ್ಮಾಣಕ್ಕೆ ಮುಂದಾಗಿವೆ. ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಹಾದು ಹೋಗುವ ಈ ಯೋಜನೆಯನ್ನು ಅನುಷ್ಠಾನಗೊಳಿಸಿ ಭಾರತದ ಮೇಲೆ ಭದ್ರತಾ ಆತಂಕ ತಂದೊಡ್ಡುವುದು ಪಾಕ್‌ನ ತಂತ್ರವಾಗಿತ್ತು. ಈ ಯೋಜನೆ ಕಾರ್ಯಗತ ಮಾಡಲು ಪಾಕ್‌ ಸಾಲದ ಹೊರೆಯಲ್ಲಿ ಮುಳುಗಿದೆ. ಮಿತ್ರ ರಾಷ್ಟ್ರ ಚೀನಾವೊಂದರಿಂದಲೇ 40,000 ಕೋಟಿ ರು. ಸಾಲ ಮಾಡಿದೆ. ಅದೂ ಸಾಲದೆ ಸಿಪಿಇಸಿ ಯೋಜನೆಗಾಗಿ ಹಣ ಹೊಂದಿಸಲು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌)ಯ ಮೊರೆ ಹೋಗಿತ್ತು. ಆದರೆ ಚೀನಾದ ಸಾಲ ತೀರಿಸದೆ ಮತ್ತೆ ಸಾಲ ನೀಡಲು ಸಾಧ್ಯವಿಲ್ಲವೆಂದು ಐಎಂಎಫ್‌ ವಾಪಸ್‌ ಕಳಿಸಿದೆ.

21 ಕೋಟಿ ಜನರಲ್ಲಿ ತೆರಿಗೆ ಕಟ್ಟುವವರು 1% ಮಾತ್ರ!

ಮಾಹಿತಿಗಳ ಪ್ರಕಾರ ಪಾಕಿಸ್ತಾನದ 21 ಕೋಟಿ ಜನರ ಪೈಕಿ ತೆರಿಗೆ ಕಟ್ಟುತ್ತಿರುವವರು ಕೇವಲ ಶೇ.1ರಷ್ಟುಜನರು. ಅಲ್ಲದೆ ತೆರಿಗೆ ಮತ್ತು ಜಿಡಿಪಿ ಪ್ರಮಾಣ ಅತಿ ಕೆಳಮಟ್ಟದಲ್ಲಿದೆ. ಸರ್ಕಾರಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ತೆರಿಗೆದಾರರಿಂದ ತೆರಿಗೆ ಸಂಗ್ರಹಿಸಿ ಹಣ ಹೊಂದಿಸುವುದೂ ಅಷ್ಟುಸುಲಭದ ಕೆಲಸವಲ್ಲ.

ಎಮ್ಮೆ, ಹಳೆ ಕಾರು ಹರಾಜಿಗೆ ಹಾಕಿದ್ದೇಕೆ?

ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅಧಿಕಾರದಲ್ಲಿದ್ದಾಗ ಶೋಕಿಗಾಗಿ ಪ್ರಧಾನಿ ನಿವಾಸದಲ್ಲಿ ಕೆಲ ಎಮ್ಮೆಗಳನ್ನು ಸಾಕಿದ್ದರು. ಸದ್ಯ ರಾಷ್ಟ್ರ ಆರ್ಥಿಕ ಸಂಕಷ್ಟದಿಂದ ದಿವಾಳಿಯಾಗುವ ಎಲ್ಲಾ ಸಾಧ್ಯತೆಗಳಿರುವ ಕಾರಣ ಇತ್ತೀಚೆಗೆ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಇಮ್ರಾನ್‌ ಖಾನ್‌, ಪ್ರಧಾನಿ ನಿವಾಸದಲ್ಲಿದ್ದ 8 ಎಮ್ಮೆಗಳನ್ನು ಹರಾಜು ಹಾಕಿದ್ದಾರೆ. ಜೊತೆಗೆ ಇನ್ನಿತರ ಪ್ರಮುಖ ಐಷಾರಾಮಿ ವಸ್ತುಗಳನ್ನೂ ಹರಾಜು ಹಾಕಿದ್ದಾರೆ. ಮಾಜಿ ಪ್ರಧಾನಿಗಳು ಹಾಗೂ ಉನ್ನತ ಅಧಿಕಾರಿಗಳು ಓಡಾಡುವ 100ಕ್ಕೂ ಅಧಿಕ ಕಾರುಗಳು ಹಾಗೂ 4 ಹೆಲಿಕಾಪ್ಟರ್‌ಗಳನ್ನೂ ಹರಾಜು ಹಾಕಲಾಗಿದೆ. ಸತತ ವಿದೇಶಿ ಸಾಲದಿಂದ ಬಳಲುತ್ತಿರುವ ಪಾಕಿಸ್ತಾನ ಇದೀಗ ಸಾಲದ ಬಡ್ಡಿಯನ್ನು ಪಾವತಿಸಲೂ ಹೆಣಗಾಡುತ್ತಿದೆ. ಐಷಾರಾಮಿ ಕಾರುಗಳ ಮಾರಾಟದಿಂದ ಸರ್ಕಾರಕ್ಕೆ 200 ಕೋಟಿ ರು. ಆದಾಯ ಬಂದಿರುವ ಅಂದಾಜಿದೆ. ಆದರೆ, ಈ ಹಣ ಪಾಕ್‌ನ ದುಸ್ಥಿತಿ ಸರಿಪಡಿಸಲು ಯಾವ ಮೂಲೆಗೂ ಸಾಲುತ್ತಿಲ್ಲ.

ಪಾಕ್‌ನ ದುಸ್ಥಿತಿ ಸುಧಾರಿಸುತ್ತಾ?

ಸದ್ಯ ಪಾಕಿಸ್ತಾನದಲ್ಲಿ ಆಮದು ವೆಚ್ಚಕ್ಕಾಗುವಷ್ಟುಮಾತ್ರ ವಿದೇಶಿ ವಿನಿಮಯ ಸಂಗ್ರಹ ಇದೆ. 2018ರಲ್ಲಿ ಜಿಡಿಪಿ ಬೆಳವಣಿಗೆ ಶೇ.5.8ರಷ್ಟಿದ್ದರೂ, ಮುಂದಿನ 2 ವರ್ಷ ಶೇ.3ಕ್ಕೆ ಕುಸಿಯುವ ನಿರೀಕ್ಷೆ ಇದೆ. ಪಾಕಿಸ್ತಾನದ ವಿದೇಶಿ ಸಾಲ ಡಾಲರ್‌ಗಳಲ್ಲಿದ್ದು, ಡಾಲರ್‌ ಎದುರು ಪಾಕ್‌ನ ರುಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಸಾಲದ ಹೊರೆ ಹೆಚ್ಚಾಗುತ್ತಲೇ ಸಾಗಿದೆ. ಆರ್ಥಿಕತೆ ಕೂಡ ಹಳ್ಳ ಹಿಡಿಯುತ್ತಿರುವುದರಿಂದ ರುಪಾಯಿ ಚೇತರಿಸಿಕೊಳ್ಳುವ ಲಕ್ಷಣಗಳಿಲ್ಲ. 2016ರಿಂದ ಪಾಕಿಸ್ತಾನವು ಚೀನಾದಿಂದ ಮೂಲಸೌಕರ್ಯ ಯೋಜನೆಯ ಸಲುವಾಗಿ ಭಾರಿ ಪ್ರಮಾಣದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಆಮದು ಮಾಡಿದೆ. ಇದರಿಂದ ವಿತ್ತಿಯ ಕೊರತೆ ಜಾಸ್ತಿಯಾಗಿದೆ. ಪಾಕಿಸ್ತಾನದ ಹಣದುಬ್ಬರ ಶೇ.7.1ಕ್ಕೆ ಏರಿದ್ದು, ಕಳೆದ 4 ವರ್ಷಗಳಲ್ಲಿ ಗರಿಷ್ಠ ಮಟ್ಟಕ್ಕೆ ಜಿಗಿದಿದೆ. ಇಮ್ರಾನ್‌ ಖಾನ್‌ಗೆ ಆಡಳಿತದ ಅನುಭವ ಇಲ್ಲದಿರುವುದರಿಂದ ಪಾಕಿಸ್ತಾನ ಈ ಸಂಕಷ್ಟದಿಂದ ಹೇಗೆ ಹೊರಬರುತ್ತದೆ ಎಂದು ಭಾರತ ಹಾಗೂ ಅನೇಕ ರಾಷ್ಟ್ರಗಳು ಕುತೂಹಲದಿಂದ ನೋಡುತ್ತಿವೆ.

-ಕೀರ್ತಿ ತೀರ್ಥಹಳ್ಳಿ