"ಇಂತಹ ಆರೋಪಗಳನ್ನು ಮುಂದಿಟ್ಟುಕೊಂಡು ಪಾಕ್ ಗಡಿಭಾಗದಲ್ಲಿ ಭಾರತೀಯ ಸೇನೆ ಏನಾದರೂ ತಂಟೆ ಮಾಡಲು ಬಂದರೆ ಪಾಕಿಸ್ತಾನ ಯಾವುದಕ್ಕೂ ಸಿದ್ಧವಾಗಿ ನಿಂತಿರುತ್ತದೆ."

ಇಸ್ಲಾಮಾಬಾದ್(ನ. 23): ಪಾಕಿಸ್ತಾನೀಯರು ಭಾರತದ ಗಡಿಯೊಳಗೆ ನುಗ್ಗಿ ಒಬ್ಬ ಸೈನಿಕನ ರುಂಡ ಕತ್ತರಿಸಿದ್ದಾರೆಂಬ ಆರೋಪವನ್ನು ಪಾಕಿಸ್ತಾನ ತಳ್ಳಿಹಾಕಿದೆ. ಭಾರತೀಯ ಮಾಧ್ಯಮಗಳಲ್ಲಿ ಬಂತಂತಹ ಈ ವರದಿಗಳು ಸುಳ್ಳು ಹಾಗೂ ಆಧಾರರಹಿತ ಎಂದು ಪಾಕಿಸ್ತಾನದ ವಿದೇಶಾಂಗ ಇಲಾಖೆಯ ವಕ್ತಾರ ನಫೀಸ್ ಜಕಾರಿಯಾ ಸ್ಪಷ್ಟಪಡಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

"ಈ ವರದಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಪಾಕಿಸ್ತಾನಕ್ಕೆ ಕಪ್ಪುಮಸಿ ಬಳಿಯುವ ಯತ್ನ ಮಾಡಲಾಗುತ್ತಿದೆ... ವೃತ್ತಿಪರವಾಗಿರುವ ಪಾಕಿಸ್ತಾನದಿಂದ ಇಂತಹ ಹೀನ ಹಾಗೂ ಹೇಡಿತನದ ಕೃತ್ಯಗಳು ನಡೆಯಲು ಸಾಧ್ಯವಿಲ್ಲ. ಅಂಥವಕ್ಕೆ ತಾವು ಅವಕಾಶವನ್ನೂ ಕೊಡುವುದಿಲ್ಲ," ಎಂದು ಜಕಾರಿಯಾ ಟ್ವೀಟ್'ಗಳ ಮೂಲಕ ತಿಳಿಸಿದ್ದಾರೆ.

ಆದರೆ, ಇಂತಹ ಆರೋಪಗಳನ್ನು ಮುಂದಿಟ್ಟುಕೊಂಡು ಪಾಕ್ ಗಡಿಭಾಗದಲ್ಲಿ ಭಾರತೀಯ ಸೇನೆ ಏನಾದರೂ ತಂಟೆ ಮಾಡಲು ಬಂದರೆ ಪಾಕಿಸ್ತಾನ ಯಾವುದಕ್ಕೂ ಸಿದ್ಧವಾಗಿ ನಿಂತಿರುತ್ತದೆ ಎಂದವರು ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ನಿನ್ನೆ, ಪಾಕಿಸ್ತಾನದ ಗಡಿಭಾಗದಿಂದ ಒಳನುಸುಳಿ ಬಂದ ಉಗ್ರಗಾಮಿಗಳು ಮೂವರು ಭಾರತೀಯ ಸೈನಿಕರನ್ನು ಹತ್ಯೆಗೈದಿದ್ದಾರೆ. ಅಲ್ಲದೇ ಒಬ್ಬ ಸೈನಿಕರ ತಲೆ ಕಡಿದು ವಾಪಸ್ ಹೋಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಸೈನಿಕನ ತಲೆ ಕತ್ತರಿಸಲಾಗಿರುವುದನ್ನು ಭಾರತೀಯ ಸೇನೆ ಕೂಡ ಒಪ್ಪಿಕೊಂಡಿದೆ. ಆದರೆ, ಹೇಡಿತನದ ಈ ಕೃತ್ಯಕ್ಕೆ ಪಾಕಿಸ್ತಾನ ಭಾರೀ ಬೆಲೆ ತೆರಬೇಕಾಗಬಹುದೆಂದು ಭಾರತೀಯ ಸೇನೆ ಎಚ್ಚರಿಕೆ ನೀಡಿದೆ.