ವಾಷಿಂಗ್ಟನ್(ಜು.24): ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂದು ಇಡಿ ಜಗತ್ತೇ ಬೊಬ್ಬಿಡುತ್ತಿತ್ತು. ನಾವು ಉಗ್ರವಾದಕ್ಕೆ ಪೋಷಣೆ ನೀಡುವುದಿಲ್ಲ ಎಂದು ಪಾಕಿಸ್ತಾನ ಅದೇ ಹಳೆಯ ರಾಗ ಹಾಡುತ್ತಾ ಕಾಲ ಕಳೆಯುತ್ತಿತ್ತು.

ಆದರೆ ಸತ್ಯ ಎಂದಿಗೂ ಮುಚ್ಚಿಡಲು ಸಾಧ್ಯವೇ ಇಲ್ಲ. ಪಾಕಿಸ್ತಾನದಲ್ಲಿ ಭಯೋತ್ಪಾದಕರ ದಂಡೇ ಇದೆ ಎಂಬ ಸತ್ಯವನ್ನು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಕೊನೆಗೂ ಒಪ್ಪಿಕೊಂಡಿದ್ದಾರೆ.

ಹೌದು, ಪಾಕಿಸ್ತಾನದಲ್ಲಿ ಸುಮಾರು 40 ಸಾವಿರ ಉಗ್ರರಿದ್ದಾರೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಹಿರಂಗವಾಗಿ ಒಪ್ಪಿಕೊಂಡಿದ್ದಾರೆ. ಅಮೆರಿಕ ಪ್ರವಾಸದಲ್ಲಿರುವ ಇಮ್ರಾನ್, ಯುನೈಟೆಡ್ ಸ್ಟೇಟ್ಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ ಸಂಸ್ಥೆಯ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಪಾಕ್‌ನಲ್ಲಿ ಭಯೋತ್ಪಾದಕರಿರುವ ಕುರಿತು ಹೇಳಿಕೆ ನೀಡಿದ್ದಾರೆ.

ಪಾಕಿಸ್ತಾನದಲ್ಲಿ ಸುಮಾರು 40 ಸಾವಿರ ಉಗ್ರರಿದ್ದು, ಅವರೆಲ್ಲರೂ ಅಫ್ಘಾನಿಸ್ತಾನ್ ಹಾಗೂ ಕಾಶ್ಮೀರದಲ್ಲಿ ತರಬೇತಿ ಪಡೆದು ಪಾಕಿಸ್ತಾನದಲ್ಲಿ ಸಕ್ರೀಯರಾಗಿದ್ದಾರೆ ಎಂದು ಇಮ್ರಾನ್ ಹೇಳಿದ್ದಾರೆ. 

2014ರಲ್ಲಿ ನಡೆದ ಸೇನಾ ಶಾಲೆಯ ಮೇಲಿನ ದಾಳಿ ಬಳಿಕ ಪಾಕಿಸ್ತಾನದ ರಾಜಕೀಯ ಮಹತ್ತರ ಬದಲಾವಣೆಗಳಾಗಿದ್ದು, ಉಗ್ರರಿಗೆ ಸಂಬಂಧಿಸಿದಂತೆ ಎಲ್ಲ ರಾಜಕೀಯ ಪಕ್ಷಗಳೂ ಒಗ್ಗೂಡಿ ಉಗ್ರರ ಮಟ್ಟಹಾಕಲು ಕ್ರಿಯಾ ಯೋಜನೆ ರೂಪಿಸಿವೆ ಎಂದು ಪಾಕ್ ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಪಾಕಿಸ್ತಾನದಲ್ಲಿರುವ ಉಗ್ರರು ಅಫ್ಘಾನಿಸ್ತಾನ್ ಹಾಗೂ ಕಾಶ್ಮೀರದಲ್ಲಿ ತರಬೇತಿ ಪಡೆದು ದೇಶದೊಳಕ್ಕೆ ನುಗ್ಗಿದ್ದಾರೆ ಎಂದು ಹೇಳುವ ಮೂಲಕ, ಇಮ್ರಾನ್ ಖಾನ್ ಭಾರತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ ಎಂಬುದೂ ಸ್ಪಷ್ಟ.