ಇಸ್ಲಾಮಾಬಾದ್(ಅ.13): ಸಿರಿಯಾ ಮೇಲಿನ ದಾಳಿಗಾಗಿ ಇಡೀ ವಿಶ್ವ ಟರ್ಕಿಗೆ ಬೈಯುತ್ತಿದ್ದರೆ, ಪಾಕಿಸ್ತಾನ ಮಾತ್ರ ಒಳ್ಳೆ ಕೆಲಸ ಎಂದು ಶಹಬ್ಬಾಸಗಿರಿ ನೀಡಿ ಅಚ್ಚರಿ ಮೂಡಿಸಿದೆ.

ಸಿರಿಯಾದ ಖುರ್ದಿಷ್ ಹೋರಾಟಗಾರರ ಮೇಲೆ ಟರ್ಕಿ ದಾಳಿ ನಡೆಸಿದ್ದು, ಇದರಿಂದ ಐಸಿಸ್ ವಿರುದ್ಧ ಹೋರಾಡುತ್ತಿರುವ ಖುರ್ದಿಷ್ ಹೋರಾಟಗಾರರು ಚದುರಿದ್ದಾರೆ.

ಟರ್ಕಿಯ ಈ ನಡೆಯಿಂದಾಗಿ ಸಿರಿಯಾದಲ್ಲಿ ಮತ್ತೆ ಐಸಿಸ್ ತಲೆಯೆತ್ತಲಿದೆ ಎಂದು ಅಮೆರಿಕ ಗಂಭಿರ ಎಚ್ಚರಿಕೆ ನೀಡಿದೆ. ಅಲ್ಲದೇ ಟರ್ಕಿಯ ಸಿರಿಯಾ ಮೇಲಿನ ದಾಳಿ ಒಪ್ಪಲು ಸಾಧ್ಯವಿಲ್ಲ ಎಂದು ಭಾರತ ಕೂಡ ಆಕ್ಷೇಪ ವ್ಯಕ್ತಪಡಿಸಿದೆ.

ಆದರೆ ಟರ್ಕಿ ಬೆಂಬಲಕ್ಕೆ ನಿಂತಿರುವ ಪಾಕಿಸ್ತಾನ, ಟರ್ಕಿ ನೆಲೆಗಳ ಮೇಲೆ ದಾಳಿ ಮಾಡಿದ ಖುರ್ದಿಷ್ ಬಂಡುಕೋರರ ವಿರುದ್ಧ ದಾಳಿ ಮಾಡಿದ್ದು ಸರಿ ಎಂದು ಹೇಳಿದೆ.

ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್ ಅವರಿಗೆ ಕರೆ ಮಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಉತ್ತರ ಸಿರಿಯಾ ಮೇಲಿನ ದಾಳಿಗೆ ಬೆಂಬಲ ಸೂಚಿಸಿದ್ದಾರೆ.