ನವದೆಹಲಿ [ಸೆ.06]: ಕಾಶ್ಮೀರಕ್ಕೆ ದೊರೆಯುತ್ತಿದ್ದ ವಿಶೇಷ ಸ್ಥಾನಮಾನವನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಕೆಂಡಕಾರುತ್ತಿರುವ ಪಾಕಿಸ್ತಾನ, ಇದೀಗ ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ ಸದ್ದಿಲ್ಲದೇ ಸೇನೆ ಜಮಾವಣೆ ಮಾಡಲು ಆರಂಭಿಸಿದೆ. ಪಾಕಿಸ್ತಾನದ ಶಾಂತಿಯುತ ಸ್ಥಳಗಳಲ್ಲಿದ್ದ ಸುಮಾರು 2000 ಯೋಧರನ್ನು ಎಲ್‌ಒಸಿಯಿಂದ 30 ಕಿ.ಮೀ. ದೂರದಲ್ಲಿ ಪಾಕಿಸ್ತಾನ ನಿಯೋಜನೆಗೊಳಿಸಿದೆ. ಈ ಬೆಳವಣಿಗೆಯನ್ನು ಭಾರತೀಯ ಸೇನೆ ಅತ್ಯಂತ ಸೂಕ್ಷ್ಮವಾಗಿ ಗಮನಹರಿಸಿದೆ ಎಂದು ಮೂಲಗಳು ತಿಳಿಸಿವೆ.

ವಿಶೇಷ ಸ್ಥಾನಮಾನ ರದ್ದಾಗುತ್ತಿದ್ದಂತೆ ಭಾರತದಲ್ಲಿ ಹಿಂಸಾಕೃತ್ಯ ನಡೆಸಲು ಭಾರಿ ಪ್ರಮಾಣದಲ್ಲಿ ಉಗ್ರರನ್ನು ಪಾಕಿಸ್ತಾನ ನೇಮಕ ಮಾಡಿಕೊಂಡಿತ್ತು. ಅಲ್ಲದೆ, ಉಗ್ರರನ್ನು ಭಾರತಕ್ಕೆ ಅಟ್ಟಲು ಎಲ್‌ಒಸಿಗೆ ವಿಶೇಷ ಸೇವಾ ಪಡೆ (ಎಸ್‌ಎಸ್‌ಜಿ)ಯ 100ಕ್ಕೂ ಹೆಚ್ಚು ಕಮಾಂಡೋಗಳನ್ನು ರವಾನಿಸಿತ್ತು. ಆ ಪೈಕಿ 10 ಕಮಾಂಡೋಗಳನ್ನು ಭಾರತೀಯ ಸೇನೆ ಹೊಡೆದು ಹಾಕಿತ್ತು. ಇದರ ಬೆನ್ನಲ್ಲೇ ಒಂದು ಬ್ರಿಗೇಡ್‌ ಗಾತ್ರದ ಪಡೆಯನ್ನು ಎಲ್‌ಒಸಿ ಬಳಿಗೆ ಅಟ್ಟಿದೆ.

370ನೇ ವಿಧಿ ರದ್ದಾದ ಬಳಿಕ ಭಾರತ ಹಾಗೂ ಪಾಕಿಸ್ತಾನ ನಡುವೆ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬಿಂಬಿಸಿ, ಅಂತಾರಾಷ್ಟ್ರೀಯ ಗಮನ ಸೆಳೆಯಲು ಪಾಕಿಸ್ತಾನ ಈ ಕಿತಾಪತಿ ಮಾಡುತ್ತಿರಬಹುದು ಎಂದು ಹೇಳಲಾಗಿದೆ.

ಕಾಶ್ಮೀರಕ್ಕೆ ಲಭಿಸುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ಭಾರತದ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಲಷ್ಕರ್‌ ಎ ತೊಯ್ಬಾ ಹಾಗೂ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಗಳನ್ನು ಬಳಸಿ ಸ್ಥಳೀಯವಾಗಿ ಮತ್ತು ಆಷ್ಘಾನಿಸ್ತಾನದಲ್ಲಿ ಭಾರಿ ಪ್ರಮಾಣದ ಉಗ್ರರ ನೇಮಕಾತಿಯನ್ನು ಪಾಕಿಸ್ತಾನ ಆರಂಭಿಸಿತ್ತು. ಸರ್‌ ಕ್ರೀಕ್‌ ಪ್ರದೇಶದಲ್ಲಿ ಗುಜರಾತ್‌ಗೆ ಎದುರಾಗಿ ವಿಶೇಷ ಪಡೆಗಳನ್ನು ನಿಯೋಜನೆ ಮಾಡಿತ್ತು. ಇದರಿಂದಾಗಿ ಗುಜರಾತ್‌ ಮೂಲಕ ಉಗ್ರರು ಭಾರತ ಪ್ರವೇಶಿಸಬಹುದು ಎಂಬ ಸುದ್ದಿಯೂ ಹರಿದಾಡಿತ್ತು. ಈ ನಡುವೆ, ಉಗ್ರರ ಹಣಕಾಸು ಹರಿವಿನ ಮೇಲೆ ನಿಗಾ ಇಡುವ ಅಂತಾರಾಷ್ಟ್ರೀಯ ಸಂಸ್ಥೆ ಎಫ್‌ಎಟಿಎಫ್‌ ಎಚ್ಚರಿಕೆ ಬಳಿಕ ಇದೀಗ ಉಗ್ರರ ನೇಮಕಾತಿಯನ್ನು ಪಾಕಿಸ್ತಾನ ಸ್ಥಗಿತಗೊಳಿಸಿದೆ ಎನ್ನಲಾಗಿದೆ. ಇದರ ಬೆನ್ನಲ್ಲೇ ಯೋಧರನ್ನು ಎಲ್‌ಒಸಿಯತ್ತ ಅಟ್ಟಿದೆ.