ನವದೆಹಲಿ(ಸೆ.20): ಕಾಶ್ಮೀರದ ಉರಿಯಲ್ಲಿ ಉಗ್ರರ ದಾಳಿಗೆ 20 ಯೋಧರು ಹುತಾತ್ಮರಾಗಿದ್ದು ಪಾಕ್​ ವಿರುದ್ಧ ಇತರೇ ದೇಶಗಳೂ ಕಿಡಿ ಕಾರಿವೆ. ಉರಿ ದಾಳಿ ಬಗ್ಗೆ ಪ್ರಧಾನಿ ಮೋದಿ ರಾಷ್ಟ್ರಪತಿಯನ್ನ ಭೇಟಿ ಮಾಡಿದ್ದು ಪಾಕ್​ಗೆ ತಕ್ಕ ಪಾಠ ಕಲಿಸಲು ಯುದ್ಧ ಘೋಷಿಸುತ್ತಾರಾ ಅನ್ನೋ ಪ್ರಶ್ನೆ ಎದುರಾಗಿದೆ..

ಇಂಥದ್ದೊಂದು ಸನ್ನಿವೇಶ ಈಗ ಭಾರತ ಪಾಕ್​ ನಡುವೆ ನಿರ್ಮಾಣವಾಗಿದೆ. ಯಾಕೆಂದರೆ ಕಾಶ್ಮೀರದ ಉರಿ ವಲಯದಲ್ಲಿ ಪಾಕ್‌ ಭಯೋತ್ಪಾದಕರು 18 ಸೈನಿಕರನ್ನು ಹತ್ಯೆ ಮಾಡಿರುವುದು ಭಾರತದ ಸಹನೆಯ ಕಟ್ಟೆ ಒಡೆಯುವಂತೆ ಮಾಡಿದೆ. ಉಗ್ರರ ಕೃತ್ಯಕ್ಕೆ ದೇಶದೆಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಹೀಗಾಗಿ ಪಾಕಿಸ್ಥಾನ ಮೇಲೆ ಯುದ್ಧ ಮಾಡಬೇಕು ಎಂಬ ಒತ್ತಡ ಸರಕಾರದ ಮೇಲೆ ಹೆಚ್ಚತೊಡಗಿದೆ.

ರಾಷ್ಟ್ರಪತಿ ಭೇಟಿಯಾದ ಪ್ರಧಾನಿ ಮೋದಿ

ಇದಕ್ಕೆ ಪೂರಕವಾಗಿ ಉರಿಯಲ್ಲಿ ದಾಳಿ ನಡೆದ ಕ್ಷಣದಿಂದ ಪ್ರಧಾನಿ ಮೋದಿ ಸಹಿತ ಸರ್ಕಾರ ಹಿರಿಯ ಸಚಿವರು, ಹಾಗೂ ಸೇನೆಯ ಹಿರಿಯ ಅಧಿಕಾರಿಗಳ ಮಟ್ಟದಲ್ಲಿ ಸಭೆಗಳಾಗ್ತಿವೆ. ದಾಳಿಗೆ ಪಾಕಿಸ್ತಾನ ಕಾರಣ ಅಂತ ಗೊತ್ತಾಗಿದ್ದೇ ಭಾರತದ ಮುಂದಿನ ನಡೆ ಏನಿರಬೇಕು ಎಂಬ ಚರ್ಚೆಗಳು ಆರಂಭವಾಗಿದೆ. ಪ್ರಧಾನಿ ಮೋದಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿರವರನ್ನ ಭೇಟಿ ಮಾಡಿ ಗಂಭೀರ ಚರ್ಚೆ ನಡೆಸಿದ್ದಾರೆ. ಹೀಗಾಗಿ ಪಾಕಿಸ್ತಾನದ ವಿರುದ್ಧ ಯಾವುದೇ ಕ್ಷಣದಲ್ಲೂ ಭಾರತ ಯುದ್ಧ ಸಾರಬಹುದು ಅನ್ನೋ ಮಾತುಗಳು ಕೇಳಿ ಬರ್ತಿವೆ..

ಭಾರತದ ಬೆಂಬಲಕ್ಕೆ ನಿಂತ ಜರ್ಮನಿ, ಅಫ್ಘಾನಿಸ್ತಾನ

ಇನ್ನು ಭಾರತವಲ್ಲದೇ ಜರ್ಮನಿ, ಅಫ್ಘಾನಿಸ್ತಾನ ರಾಷ್ಟ್ರಗಳೂ ಪಾಕಿಸ್ತಾನದ ವಿರುದ್ಧ ಕೆಂಡ ಕಾರಿವೆ.. ಜರ್ಮನಿ ಪ್ರತಿಯೊಂದು ದೇಶವೂ ತನ್ನ ಮಣ್ಣಿನಲ್ಲಿ ಹುಟ್ಟುವ ಉಗ್ರರನ್ನ ಸೆದೆಬಡಿಯಬೇಕು ಅಂತ ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದೆ. ಇತ್ತ ಗಡಿಯಲ್ಲಿ ಉಗ್ರರಿಗಾಗಿ ಶೋಧ ಕಾರ್ಯ ಮುಂದುವರಿದ್ದು ಉಗ್ರರನ್ನು ಹತ್ತಿಕ್ಕಲು ಅಫ್ಘಾನಿಸ್ತಾನ ಭಾರತದ ಜೊತೆ ಕೈಜೋಡಿಸುವುದಾಗಿ ಬೆಂಬಲಸೂಚಿಸಿದೆ.

ಒಟ್ಟಾರೆ ಉರಿಯಲ್ಲಿ ಪಾಕ್​ ಉಗ್ರರು ಈ ಬಾರಿ ನಡೆಸಿರುವ ದಾಳಿ ಭಾರತವನ್ನು ಕೆರಳಿಸಿದ್ದು . ಆದರೆ ದಾಳಿಕೋರರನ್ನು ಸುಮ್ಮನೇ ಬಿಡುವುದಿಲ್ಲ ಅಂತ ಪ್ರಧಾನಿ ನರೇಂದ್ರ ಮೋದಿ ಹೇಳಿರುವುದು ಯುದ್ಧದ ಊಹಾಪೋಹಕ್ಕೆ ನಾಂದಿ ಹಾಡಿದೆ.