ಲಂಡನ್‌[ಆ.27]: ಭಾರತ ಹಾಗೂ ಪಾಕಿಸ್ತಾನ ನಡುವಣ ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ತುದಿಗಾಲಿನಲ್ಲಿ ನಿಂತಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಈಗ ಹಿಂದೆ ಸರಿದಿದ್ದಾರೆ. ‘ಉಭಯ ದೇಶಗಳ ಮಧ್ಯದ ಎಲ್ಲ ವಿಷಯಗಳನ್ನು ಚರ್ಚಿಸಿ, ನಾವೇ ಬಗೆಹರಿಸಿಕೊಳ್ಳುತ್ತೇವೆ. ಮೂರನೇ ದೇಶಕ್ಕೆ ತೊಂದರೆ ಕೊಡಲು ನಾವು ಬಯಸುವುದಿಲ್ಲ’ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಮಾತಿಗೆ ಟ್ರಂಪ್‌ ಮಣಿದಿದ್ದಾರೆ. ನೀವೇ ಬಗೆಹರಿಸಿಕೊಳ್ಳಿ ಎನ್ನುವ ಮೂಲಕ ದೂರ ಸರಿದಿದ್ದಾರೆ.

ಅಮೆರಿಕ ಅಧ್ಯಕ್ಷ ಅದರಲ್ಲೂ ಟ್ರಂಪ್‌ರಂತಹ ಹಟಮಾರಿ ನಾಯಕರನ್ನು ಮೋದಿ ಅವರು ಮಾತುಕತೆ ಮೂಲಕ ಮನವೊಲಿಸಿರುವುದು ಹಲವರ ಅಚ್ಚರಿಗೆ ಕಾರಣವಾಗಿದೆ. ಕಾಶ್ಮೀರ ವಿಷಯದಲ್ಲಿ ಸರ್ಕಾರಕ್ಕೆ ಮತ್ತೊಂದು ಜಯ ಸಿಕ್ಕಂತಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಪಾಪರ್‌ ಪಾಕಿಸ್ತಾನದಲ್ಲಿ ಹೊಸ ಉದ್ಯೋಗ ಇಲ್ಲ, ಎರಡೂ ಬದಿ ಪ್ರಿಂಟ್‌!

ಫ್ರಾನ್ಸ್‌ನ ಕರಾವಳಿಯ ಸುಂದರ ನಗರ ಬಿಯಾರಿಟ್‌್ಜನಲ್ಲಿ ನಡೆಯುತ್ತಿರುವ ಜಿ7 ಶೃಂಗದ ಸಂದರ್ಭದಲ್ಲಿ ಮೋದಿ ಹಾಗೂ ಟ್ರಂಪ್‌ ಅವರು ಮಾತುಕತೆ ನಡೆಸಿದರು. ಬಳಿಕ ಇಬ್ಬರೂ ಸೋಮವಾರ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದರು. ‘1947ಕ್ಕೂ ಮುನ್ನ ಭಾರತ ಹಾಗೂ ಪಾಕಿಸ್ತಾನ ಒಟ್ಟಿಗೇ ಇದ್ದವು. ನಾವೆರಡೂ ದೇಶಗಳು ನಮ್ಮಗಳ ಸಮಸ್ಯೆಗಳ ಬಗ್ಗೆ ಚರ್ಚಿಸಿ, ಬಗೆಹರಿಸಿಕೊಳ್ಳುತ್ತೇವೆ. ಆ ಬಗ್ಗೆ ವಿಶ್ವಾಸವಿದೆ. ಭಾರತ ಹಾಗೂ ಪಾಕಿಸ್ತಾನ ನಡುವೆ ಹಲವಾರು ದ್ವಿಪಕ್ಷೀಯ ವಿಚಾರಗಳಿವೆ. ಅದರಲ್ಲಿ ಮೂರನೇ ದೇಶಕ್ಕೆ ತೊಂದರೆ ನೀಡಲು ಬಯಸುವುದಿಲ್ಲ. ನಾವೇ ಮಾತನಾಡಿ ಬಗೆಹರಿಸಿಕೊಳ್ಳುತ್ತೇವೆ’ ಎಂದು ಮೋದಿ ಅವರು ಹೇಳಿದರು.

‘ನಾನು ಹಾಗೂ ಮೋದಿ ಅವರು ಭಾನುವಾರ ರಾತ್ರಿ ಕಾಶ್ಮೀರ ವಿಚಾರದ ಬಗ್ಗೆ ಮಾತನಾಡಿದೆವು. ಅಲ್ಲಿನ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಮೋದಿ ಅವರು ನನಗೆ ಹೇಳಿದರು. ಭಾರತ ಹಾಗೂ ಪಾಕಿಸ್ತಾನಗಳೇ ಈ ವಿಚಾರ ಬಗೆಹರಿಸಿಕೊಳ್ಳುವ ಭಾವನೆ ನನಗಿದೆ’ ಎಂದು ಹೇಳುವ ಮೂಲಕ ಮಧ್ಯಸ್ಥಿಕೆಗೆ ಮುಂದಾಗುವುದಿಲ್ಲ ಎಂದು ಟ್ರಂಪ್‌ ಸ್ಪಷ್ಟಪಡಿಸಿದರು.

ಇದೇ ವೇಳೆ ಮಾತನಾಡಿದ ಮೋದಿ, ಪಾಕಿಸ್ತಾನ ಪ್ರಧಾನಿ ಇಮ್ರಾನ್‌ ಖಾನ್‌ ಜತೆಗೆ ಈ ಹಿಂದೆ ನಡೆಸಿದ ದೂರವಾಣಿ ಮಾತುಕತೆಯನ್ನು ಪ್ರಸ್ತಾಪಿಸಿದರು. ‘ಎರಡೂ ದೇಶಗಳನ್ನು ಬಡತನ ಹಾಗೂ ಇನ್ನಿತರೆ ವಿಷಯಗಳು ಕಾಡುತ್ತಿವೆ. ಜನರ ಹಿತರಕ್ಷಣೆಗಾಗಿ ನಮ್ಮ ದೇಶಗಳು ಕೆಲಸ ಮಾಡಬೇಕು’ ಎಂದು ಹೇಳಿದ್ದೇನೆ ಎಂದು ತಿಳಿಸಿದರು.

ಪಾಕಿಸ್ತಾನಕ್ಕೆ ಬಿತ್ತು FATF ಪೆಟ್ಟು: ಕಪ್ಪುಪಟ್ಟಿಗೆ 'ಉಗ್ರಸ್ತಾನ'!

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿದ ಭಾರತದ ಕ್ರಮದ ವಿರುದ್ಧ ಪಾಕಿಸ್ತಾನ ಸಿಟ್ಟಾಗಿದೆ. ಹೀಗಾಗಿ ಎರಡೂ ದೇಶಗಳ ನಡುವೆ ತ್ವೇಷಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಪಾಕಿಸ್ತಾನವು ವಿಶ್ವಸಂಸ್ಥೆ ಸೇರಿದಂತೆ ಹಲವು ದೇಶಗಳ ಗಮನ ಸೆಳೆಯಲು ಪ್ರಯತ್ನಿಸಿತ್ತು. ಪಾಕಿಸ್ತಾನ ಪರವಾಗಿ ಚೀನಾ ವಿಶ್ವಸಂಸ್ಥೆಯಲ್ಲೂ ಈ ವಿಷಯ ಪ್ರಸ್ತಾಪಿಸಿತ್ತು. ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಟ್ರಂಪ್‌ ಅವರಿಗೆ ದೂರವಾಣಿ ಕರೆ ಮಾಡಿದ್ದರು. ಕಾಶ್ಮೀರ ವಿಷಯ ಕುರಿತಂತೆ ಜಿ7 ಶೃಂಗದ ಸಂದರ್ಭದಲ್ಲಿ ಮೋದಿ ಜತೆ ಮಾತನಾಡುವುದಾಗಿ ಹೇಳುವ ಮೂಲಕ ಮಧ್ಯಸ್ಥಿಕೆ ವಹಿಸುವ ಇಂಗಿತವನ್ನು ಟ್ರಂಪ್‌ ವ್ಯಕ್ತಪಡಿಸಿದ್ದರು.