ನವದೆಹಲಿ(ಮಾ.28): ಭಾರತ ಪ್ರತಿಪಾದಿಸುತ್ತಿರುವ ವಾಯುದಾಳಿಯಲ್ಲಿ ಧ್ವಂಸವಾಗಿದ್ದು ಉಗ್ರ ನೆಲೆಗಳಲ್ಲ ಎಂದು ಪಾಕಿಸ್ತಾನ ಪ್ರತಿಪಾದಿಸಿದೆ. ಪುಲ್ವಾಮಾ ದಾಳಿಯ ಕುರಿತಾದ ಪ್ರಾಥಮಿಕ ತನಿಖಾ ವರದಿಯನ್ನು ಭಾರತಕ್ಕೆ ಹಸ್ತಾಂತರಿಸಿರುವ ಪಾಕ್, ಪುಲ್ವಾಮಾ ದಾಳಿಯಲ್ಲಿ ತನ್ನ ಕೈವಾಡವನ್ನು ಸ್ಪಷ್ಟವಾಗಿ ನಿರಾಕರಿಸಿದೆ.

ಪುಲ್ವಾಮಾ ದಾಳಿಯನ್ನು ಪಾಕಿಸ್ತಾನ ಅತ್ಯುಗ್ರವಾಗಿ ಖಂಡಿಸಿದ್ದು, ಭಯೋತ್ಪಾದನೆ ಮಾನವೀಯತೆಯ ಶತ್ರು ಎಂಬುದನ್ನು ಗಟ್ಟಿ ಧ್ವನಿಯಲ್ಲಿ ಹೇಳಿದೆ. ಆದರೆ ದಾಳಿಯಲ್ಲಿ ತನ್ನ ಪಾತ್ರವಿದೆ ಎಂಬ ಆರೋಪ ಮಾತ್ರ ಸತ್ಯಕ್ಕೆ ದೂರ ಎಂದು ಪಾಕ್ ವರದಿಯಲ್ಲಿ ತಿಳಿಸಿದೆ.

ಭಾರತದ ಹೈಕಮಿನರ್ ಅವರಿಗೆ ಸಲ್ಲಿಸಿರುವ ವರದಿಯಲ್ಲಿ, ಭಾರತ ನೀಡಿದ್ದ ಸಾಕ್ಷ್ಯಾಧಾರಗಳ ಸಮಗ್ರ ತನಿಖೆ ಬಳಿಕ ಈ ವರದಿ ರಚಿಸಿರುವುದಾಗಿ ತಿಳಿಸಿದೆ. ಪುಲ್ವಾಮಾ ದಾಳಿಗೂ ತನಗೂ ಸಂಬಂಧವಿಲ್ಲ ಎಂದಿರುವ ಪಾಕ್ ಈ ಕುರಿತಾದ ತನಿಖೆ ಇದೀಗ ಪೂರ್ಣಗೊಂಡಿದ್ದು, ಭಾರತ ಇದೀಗ ವಾಯುದಾಳಿಯ ಕುರಿತಾದ ಚರ್ಚೆಗೆ ಸಿದ್ಧವಾಗಬೇಕು ಎಂದಿದೆ.

ಭಾರತ ಪ್ರತಿಪಾದಿಸುತ್ತಿರುವಂತೆ ಬಾಲಾಕೋಟ್ ವಾಯುದಾಳಿಯಲ್ಲಿ ಧ್ವಂಸವಾದ ಕಟ್ಟಡಗಳು ಉಗ್ರ ನೆಲೆಗಳಲ್ಲ ಎಂದು ಪಾಕಿಸ್ತಾನ ಹೇಳಿದೆ. ಈ ಹಿನ್ನೆಲೆಯಲ್ಲಿ ಪುಲ್ವಾಮಾ ದಾಳಿಗೆ ಸಂಬಂಧಿಸಿದಂತೆ ಮತ್ತಷ್ಟು ಸಾಕ್ಷ್ಯ ಒದಗಿಸುವುದರ ಜೊತೆಗೆ ವಾಯುದಾಳಿಯ ಕುರಿತೂ ಚರ್ಚೆ ನಡೆಸುವ ಅಗತ್ಯವಿದೆ ಎಂದು ಪ್ರಾಥಮಿಕ ತನಿಖಾ ವರದಿಯಲ್ಲಿ ಪಾಕಿಸ್ತಾನ ಉಲ್ಲೇಖಿಸಿದೆ.

ಪುಲ್ವಾಮಾ ದಾಳಿ ನಡೆಸಿದ್ದ ಆತ್ಮಹತ್ಯಾ ದಾಳಿಕೋರ ಆದಿಲ್ ದಾರ್ ವಿಡಿಯೋ ಸೇರಿದಂತೆ, ಉಗ್ರರು ಸಂಭಾಷಣೆ ನಡೆಸಿರಬಹುದಾದ ವಾಟ್ಸಪ್ ಮುಂತಾದವುಗಳ ಕುರಿತೂ ಭಾರತ ನೀಡಿದ್ದ ಸಾಕ್ಷ್ಯಗಳನ್ನು ಸಮಗ್ರವಾಗಿ ತನಿಖೆ ನಡೆಸಲಾಗಿದೆ ಎಂದು ಪಾಕಿಸ್ತಾನ ತಿಳಿಸಿದೆ.

ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ CRPFನ 49 ಯೋಧರು ಹತರಾಗಿದ್ದರು. ಈ ದುರ್ಘಟನೆ ಭಾರತ-ಪಾಕ್ ನಡುವಿನ ವೈಮನಸ್ಸು ಹೆಚ್ಚಿಸಿತ್ತು. ಪುಲ್ವಾಮಾ ದಾಳಿಗೆ ಭಾರತ ನೇರವಾಗಿ ಪಾಕಿಸ್ತಾನದತ್ತ ಬೊಟ್ಟು ಮಾಡಿದರೆ, ಪಾಕ್ ತನ್ನ ಪಾತ್ರ ನಿರಾಕರಿಸಿತ್ತು.