ನವದೆಹಲಿ(ಸೆ.07): ಜಮ್ಮು ಮತ್ತು ಕಾಶ್ಮೀರ ವಿಚಾರದಲ್ಲಿ ಭಾರತದೊಂದಿಗೆ ಜಗಳಕ್ಕೆ ನಿಂತಿರುವ ಪಾಕಿಸ್ತಾನ ಮತ್ತೆ ಉದ್ಧಟತನ ಮೆರೆದಿದೆ. 

ತನ್ನ ವಾಯುಗಡಿಯಲ್ಲಿ ಭಾರತದ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿಮಾನ ಹಾರಾಟಕ್ಕೆ ಪಾಕಿಸ್ತಾನ ಅನುಮತಿ ನಿರಾಕರಿಸಿದೆ. 

ರಾಷ್ಟ್ರಪತಿ ಕೋವಿಂದ್ ಐಸ್’ಲ್ಯಾಂಡ್, ಸ್ವಿಟ್ಜರ್’ಲ್ಯಾಂಡ್ ಹಾಗೂ ಸ್ಲೊವೇನಿಯಾ ರಾಷ್ಟ್ರಗಳ ಪ್ರವಾಸಕ್ಕೆ ತೆರಳಲಿದ್ದು, ಅವರ ವಿಮಾನ ಪ್ರಯಾಣಕ್ಕಾಗಿ ಭಾರತ ಸರ್ಕಾರ ಪಾಕಿಸ್ತಾನದ ವಾಯುಗಡಿ ಬಳಕೆ ಮಾಡಲು ಅನುಮತಿ ಕೇಳಿತ್ತು. 

ಆದರೆ ಕೋವಿಂದ್ ವಿಮಾನ ಹಾರಾಟಕ್ಕೆ ಅನುಮತಿ ನಿರಾಕರಿಸಿರುವ ಪಾಕ್, ಯಾವುದೇ ಭಾರತೀಯ ಅಥವಾ ಭಾರತೀಯ ವಿಮಾನ ತನ್ನ ವಾಯುಗಡಿ ಪ್ರವೇಶಿಸಲು ಬಿಡುವುದಿಲ್ಲ ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದೆ.

ಈ ಕುರಿತು ಮಾಹಿತಿ ನೀಡಿರುವ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹ್ಮದ್ ಖುರೇಷಿ, ಭಾರತದ ಇತ್ತೀಚಿಗಿನ ಕಾಶ್ಮೀರ ನಡೆ ಅತ್ಯಂತ ಹೇಯವಾದದ್ದು ಎಂದು ಕಿಡಿಕಾರಿದ್ದಾರೆ.

ಪುಲ್ವಾಮ ಉಗ್ರ ದಾಳಿ ಬಳಿಕ ಭಾರತ ನಡೆಸಿದ್ದ ಬಾಲಾಕೋಟ್ ವಾಯುದಾಳಿ ಬೆನ್ನಲ್ಲೇ ಪಾಕಿಸ್ತಾನ ತನ್ನ ವಾಯುಗಡಿಯನ್ನು ಭಾರತಕ್ಕೆ ನಿರ್ಬಂಧಿಸಿತ್ತು.