ಇಸ್ಲಾಮಾಬಾದ್‌[ಮಾ.16]: ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ್ದ ‘ಚಾಂಪಿಯಲ್‌ ಆಫ್‌ ಅರ್ಥ್’ ಪ್ರಶಸ್ತಿ ಹಿಂಪಡೆಯುವಂತೆ ಪಾಕಿಸ್ತಾನ ಸರ್ಕಾರ ವಿಶ್ವಸಂಸ್ಥೆಗೆ ಪತ್ರ ಬರೆದಿದೆ. ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸಲಹೆಗಾರ ಮಲಿಕ್‌ ಅಮಿನ್‌ ಅಸ್ಲಾಮ್‌ ಇದನ್ನು ಬರೆದಿದ್ದು, ಬಾಲಾಕೋಟ್‌ ಮೇಲೆ ವಾಯುದಾಳಿ ನಡೆಸುವ ಮೂಲಕ ಮೋದಿ ಪರಿಸರ ಭಯೋತ್ಪಾದನೆ ನಡೆಸಿದ್ದಾರೆ. ಹೀಗಾಗಿ ಅವರಿಗೆ ನೀಡಲಾಗಿರುವ ‘ಚಾಂಪಿಯನ್‌ ಆಫ್‌ ಅರ್ಥ್’ ಪ್ರಶಸ್ತಿ ವಾಪಸ್‌ ಪಡೆಯಬೇಕು ಎಂದು ಕೋರಿದ್ದಾರೆ.

ಪರಿಸರ ಸಂರಕ್ಷಣೆಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋದಿ ಕೈಗೊಂಡಿರುವ ಕ್ರಮಗಳನ್ನು ಗುರುತಿಸಿ ವಿಶ್ವಸಂಸ್ಥೆ ಕಳೆದ ವರ್ಷ ಈ ಪ್ರಶಸ್ತಿ ನೀಡಿತ್ತು. ಇತ್ತೀಚೆಗೆ ಬಾಲಾಕೋಟ್‌ನಲ್ಲಿ ಭಾರತದ ಯುದ್ಧವಿಮಾನಗಳು ದಾಳಿ ನಡೆಸಿ ಪೈನ್‌ ಮರಗಳನ್ನು ನಾಶಗೊಳಿಸಿವೆ ಎಂದು ಪಾಕಿಸ್ತಾನ ಆರೋಪಿಸಿದ್ದನ್ನು ಇಲ್ಲಿ ಸ್ಮರಿಸಬಹುದು.