ಇಸ್ಲಾಮಾಬಾದ್(ಡಿ.07): ಅತ್ತ ಅಮೆರಿಕದ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಮನಸ್ಸಿಗೆ ಬಂದಾಗಲೆಲ್ಲಾ ವಾಚಾಮಗೋಚರವಾಗಿ ಪಾಕಿಸ್ತಾನವನ್ನು ಬೈಯುತ್ತಿದ್ದಾರೆ. ಅಮೆರಿಕ ಅಧ್ಯಕ್ಷರ ಬೈಗುಳ ಕೇಳಿ ಕೇಳಿ ಪಾಕ್ ಪ್ರಧಾನಿ ಇಮ್ರಾನ್ ಖಾನ್ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ.

ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಗೆ ಭಾರತದ ಜೊತೆ ಕೈಜೋಡಿಸುವಂತೆ ಅಮೆರಿಕ ಈಗಾಗಲೇ ಪಾಕ್‌ಗೆ ಸೂಚನೆ ನೀಡಿದೆ. ಇದನ್ನು ಕೇಳಿಯೂ ಭಾರತದ ವಿರುದ್ಧ ಕತ್ತಿ ಮಸೆದರೆ ತುತ್ತು ಅನ್ನಕ್ಕಾಗಿ ಪರದಾಡಬೇಕಾಗುತ್ತದೆ ಎಂಬುದನ್ನು ಮನಗಂಡಿರುವ ಇಮ್ರಾನ್ ಖಾನ್, ಸೇನಾ ನಾಯಕರ ಮುಂದೆ ಕೈಜೋಡಿಸಿ ಏನಾದರೂ ಮಾಡಿ ಪ್ಲೀಸ್ ಅಂತಿದ್ದಾರೆ.

ಭಾರತವನ್ನು ನೇರ ಯುದ್ಧದಲ್ಲಿ ಎಂದೂ ಸೋಲಿಸದ ಪಾಕ್ ಸೇನೆ ಇದೀಗ ಭಾರತದತ್ತ ಸ್ನೇಹದ ಹಸ್ತ ಚಾಚುವ ಇರಾದೆ ವ್ಯಕ್ತಪಡಿಸಿದೆ. ಹೌದು ಮಾತೆತ್ತಿದರೆ ಭಾರತವನ್ನು ಮುಗಿಸಿ ಬಿಡುತ್ತೇವೆ. ಭಾರತದ ಮೇಲೆ ಅಣುಬಾಂಬ್ ಹಾಕುತ್ತೇವೆ, ದೆಹಲಿ ಸರ್ವನಾಶ ಮಾಡುತ್ತೇವೆ ಅಂತಿದ್ದ ಪಾಕ್ ಸೇನಾ ಜನರಲ್‌ಗಳು ಇದೀಗ ಅಣ್ಣಾ ಕುಳಿತು ಮಾತನಾಡಬಹುದಾ ಅಂತಾ ಭಾರತವನ್ನು ಕೇಳುತ್ತಿದ್ದಾರೆ.

ಅಮೆರಿಕದ ಕೋಪ, ಆರ್ಥಿಕ ಸಹಾಯ ನಿಲ್ಲಿಸಿದ್ದು, ಪದೇ ಪದೇ ಪಾಕಿಸ್ತಾನವನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಟ್ರಂಪ್ ಬೈಯುತ್ತಿರುವುದು ಪಾಕ್ ಸೇನೆಯನ್ನೂ ಕಂಗಾಲು ಮಾಡಿದೆ. ಇದೇ ಕಾರಣಕ್ಕೆ ಭಾರತದ ಜೊತೆ ಶಾಶ್ವತ ಶಾಂತಿಗೆ ಪಾಕ್ ಸೇನೆ ಹಾತೋರೆಯುತ್ತಿದೆ.

ಇದೇ ಕಾರಣಕ್ಕೆ ಪಾಕ್ ಸೇನಾ ಮುಖ್ಯಸ್ಥ, ಪಾಕ್ ರಕ್ಷಣಾ ಸಚಿವ, ಪಾಕ್ ಪ್ರಧಾನಿ ಹೀಗೆ ಎಲ್ಲರೂ ಭಾರತಕ್ಕೆ ನಿರಂತರವಾಗಿ ಶಾಂತಿಯ ಸಂದೇಶ ರವಾನಿಸುತ್ತಿದ್ದಾರೆ. ಅಲ್ಲದೇ ಜಾಗತಿಕ ವೇದಿಕೆಯಲ್ಲಿ ಪಾಕ್ ಮರ್ಯಾದೆ ಕಾಪಾಡುವಂತೆ ಭಾರತಕ್ಕೆ ಮನವಿ ಮಾಡುತ್ತಿದ್ದಾರೆ.

'ಗಜ್ವಾ-ಎ-ಹಿಂದ್' ಅಂತಿದ್ದ ಪಾಕ್ ಸೇನೆ PEACE ಪ್ಲೀಸ್ ಅಂತಿದೆ:

ವಿಭಜನೆ ಸಂದರ್ಭದಲ್ಲಿ 'ಗಜ್ವಾ-ಎ-ಹಿಂದ್'(ಭಾರತವನ್ನು ವಶಪಡಿಸಿಕೊಳ್ಳುತ್ತೇವೆ) ಎಂದು ಹೂಂಕರಿಸಿ ಅದನ್ನೇ ತನ್ನ ಉದ್ದೇಶ ಮಾಡಿಕೊಂಡಿದ್ದ ಪಾಕ್ ಸೇನೆ ಇದೀಗ ಶಾಂತಿಗಾಗಿ ಭಾರತಕ್ಕೆ ಮೊರೆ ಇಡುತ್ತಿದೆ. ಇದು ಈ 70 ವರ್ಷಗಳಲ್ಲಿ ಭಾರತ ಸಾಗಿ ಬಂದ ದಾರಿ ಸರಿ ಎಂಬುದನ್ನು ಸಾರಿ ಸಾರಿ ಹೇಳುತ್ತಿದೆ.