ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕೈದಿ ಕುಲಭೂಷಣ್ ಜಾಧವ್‌’ರನ್ನು ಭೇಟಿಯಾಗಲು ಅವರ ಪತ್ನಿಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅನುಮತಿ ನೀಡಿದೆ.
ನವದೆಹಲಿ (ನ.10): ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಪಾಕಿಸ್ತಾನದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತದ ಕೈದಿ ಕುಲಭೂಷಣ್ ಜಾಧವ್’ರನ್ನು ಭೇಟಿಯಾಗಲು ಅವರ ಪತ್ನಿಗೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಅನುಮತಿ ನೀಡಿದೆ.
ಏನಿದು ಜಾಧವ್ ಪ್ರಕರಣ?
2016ರ ಮಾರ್ಚ್ 3ರಂದು ಬಲೂಚಿಸ್ತಾನ ಪ್ರಾಂತ್ಯದಲ್ಲಿದ್ದ ಕುಲಭೂಷಣ್ ಜಾಧವ್'ರನ್ನು ಬಂಧಿಸಿದ್ದಾಗಿ ಪಾಕ್ ಸರಕಾರ ಹೇಳಿಕೊಂಡಿದೆ. ಬಲೂಚಿಸ್ತಾನದಲ್ಲಿ ಗೂಢಚರ್ಯ ಮತ್ತು ಭಯೋತ್ಪಾದಕ ಕೃತ್ಯಗಳಲ್ಲಿ ಜಾಧವ್ ಭಾಗಿಯಾಗಿದ್ದಾರೆ. ಅವರೇ ಸ್ವತಃ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪಾಕಿಸ್ತಾನ ಆರೋಪಿಸಿತು. ಕುಲಭೂಷಣ್ ತಪ್ಪೊಪ್ಪಿಕೊಂಡಿರುವ ವಿಡಿಯೋವನ್ನೂ ಸಾಕ್ಷಿಯಾಗಿ ಬಿಡುಗಡೆ ಮಾಡಿದೆ. ಪಾಕಿಸ್ತಾನದ ಮಿಲಿಟರಿ ಕೋರ್ಟ್'ನಲ್ಲಿ ಕ್ಷಿಪ್ರಗತಿಯಲ್ಲಿ ವಿಚಾರಣೆ ನಡೆದು, ಜಾಧವ್ ತಪ್ಪಿತಸ್ಥ ಎಂದು ಸಾಬೀತಾಯಿತು. ಅವರಿಗೆ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಹೊರಡಿಸಿತು.
ಭಾರತದ ವಾದವೇ ಬೇರೆ:
ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿಯಾಗಿರುವ ಕುಲಭೂಷಣ್ ಜಾಧವ್ ಅವರು ಇರಾನ್ ದೇಶದಲ್ಲಿ ವೈಯಕ್ತಿಕ ವ್ಯವಹಾರದಲ್ಲಿ ತೊಡಗಿದ್ದರು. ಪಾಕಿಸ್ತಾನವು ಅವರನ್ನು ಇರಾನ್'ನಲ್ಲಿ ಬಂಧಿಸಿ ಬಳಿಕ ಪಾಕಿಸ್ತಾನಕ್ಕೆ ಕರೆದೊಯ್ಯಿತು. ಕುಲಭೂಷಣ್ ಅವರು ಯಾವುದೇ ಗೂಢಚಾರಿಕೆಯಲ್ಲಿ ತೊಡಗಿರಲಿಲ್ಲ. ಪಾಕಿಸ್ತಾನ ಬೇಕಂತಲೇ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದೆ ಎಂಬುದು ಭಾರತದ ವಾದ.
