ಶಾಹಿದ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾಜನಾಥ್ ಸಿಂಗ್, ಗಡಿಭಾಗದಲ್ಲಿ ಪಾಕಿಸ್ತಾನದ ತಂಟೆಯನ್ನು ಭಾರತ ಎಳ್ಳಷ್ಟೂ ಸಹಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
ಜಮ್ಮು(ಡಿ. 11): ಗಡಿ ನಿಯಮ ಉಲ್ಲಂಘನೆ ಮತ್ತು ಭಯೋತ್ಪಾದನೆಯನ್ನು ಪಾಕಿಸ್ತಾನ ಕೈಬಿಡದೇ ಹೋದರೆ ತಕ್ಕ ಶಾಸ್ತಿ ಎದುರಿಸಬೇಕಾಗುತ್ತದೆ ಎಂದು ಗೃಹ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ತನ್ನ ದುರ್ಬುದ್ಧಿಯನ್ನು ಮುಂದುವರಿಸಿದರೆ 10 ಹೋಳುಗಳಾಗುವುದನ್ನು ನೋಡಬೇಕಾಗುತ್ತದೆ ಎಂದವರು ಹೇಳಿದ್ದಾರೆ.
"ಇದೂವರೆಗೆ ಪಾಕಿಸ್ತಾನ ಎರಡು ಹೋಳಾಗಿ(ಬಾಂಗ್ಲಾದೇಶ) ವಿಭಜಿತವಾಗಿದೆ. ಇನ್ನೂ ಪಾಠ ಕಲಿಯದೇ ಹೋದರೆ 10 ಭಾಗವಾಗಿ ವಿಭಜಿತವಾಗಬೇಕಾಗುತ್ತದೆ," ಎಂದು ರಾಜನಾಥ್ ಸಿಂಗ್ ವಿವರಿಸಿದ್ದಾರೆ.
ಪಾಕಿಸ್ತಾನದ ನೆಲವನ್ನು ಆಕ್ರಮಿಸುವ ಯಾವುದೇ ಇರಾದೆ ಭಾರತಕ್ಕಿಲ್ಲ ಎಂದು ಸ್ಪಷ್ಟಪಡಿಸಿದ ರಾಜನಾಥ್ ಸಿಂಗ್, "ಬೇರೆ ದೇಶವನ್ನು ಆಕ್ರಮಿಸುವ ಉದ್ದೇಶವಿಲ್ಲದ ಏಕೈಕ ರಾಷ್ಟ್ರವೆಂದರೆ ಭಾರತ. ನಾವು ವಿಸ್ತರಣಾವಾದಿಗಳಲ್ಲ. ಇಡೀ ವಿಶ್ವವೇ ಒಂದು ಕುಟುಂಬ ಎಂದೆನ್ನುವ ವಸುಧೈವ ಕುಟುಂಬಕಮ್ ಎಂಬ ಸಂದೇಶವನ್ನು ವಿಶ್ವಕ್ಕೆ ಕೊಟ್ಟಿರುವ ಸಂಸ್ಕೃತಿ ನಮ್ಮದು" ಎಂದು ಹೇಳಿದ್ದಾರೆ.
ಶಾಹಿದ್ ದಿವಸ್ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ರಾಜನಾಥ್ ಸಿಂಗ್, ಗಡಿಭಾಗದಲ್ಲಿ ಪಾಕಿಸ್ತಾನದ ತಂಟೆಯನ್ನು ಭಾರತ ಎಳ್ಳಷ್ಟೂ ಸಹಿಸುವುದಿಲ್ಲ ಎಂದು ಪುನರುಚ್ಚರಿಸಿದ್ದಾರೆ.
"ಗಡಿಯಲ್ಲಿ ಮೊದಲು ಗುಂಡು ಹಾರಿಸಬಾರದು ಎಂದು ನಮ್ಮ ಸೇನೆಗೆ ತಿಳಿಸಿದ್ದೇನೆ. ಆದರೆ, ಪಾಕಿಸ್ತಾನದಿಂದ ಮೊದಲ ಗುಂಡು ಹಾರಿ ಬಂದರೆ, ಎದುರಾಳಿಗಳ ಎದೆ ಸೀಳಲು ಎಷ್ಟು ಬೇಕಾದರೂ ಗುಂಡುಗಳನ್ನು ಬಳಸಲು ಹಿಂದೆಮುಂದೆ ನೋಡಬೇಡಿ ಎಂದು ತಿಳಿಸಿದ್ದೇನೆ," ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಭಯೋತ್ಪಾದನೆ ಎನ್ನುವುದು ವೀರರ ಕೆಲಸವಲ್ಲ, ಬದಲಾಗಿ ಅದು ಹೇಡಿಗಳ ಹೇಡಿತನದ ಕೃತ್ಯ ಎಂದು ಈ ವೇಳೆ ಗೃಹ ಸಚಿವರು ಪಾಕಿಸ್ತಾನದ ಉಗ್ರ ಮುಖವಾಡವನ್ನು ಖಂಡಿಸಿದ್ದಾರೆ.
