ಹೈದರಾಬಾದ್‌: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಧೈರ್ಯವಿದ್ದರೆ ಹೈದರಾಬಾದ್‌ ಕ್ಷೇತ್ರದಿಂದ ಸ್ಪರ್ಧೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಹಾಗೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ಆ ಕ್ಷೇತ್ರದ ಹಾಲಿ ಸಂಸದರೂ ಆಗಿರುವ ಮಜಲಿಸ್‌ ಎ ಇತ್ತೇಹಾದುಲ್‌ ಮುಸ್ಲಿಮಿನ್‌ (ಎಂಐಎಂ) ಪಕ್ಷದ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಸವಾಲು ಹಾಕಿದ್ದಾರೆ.

ಪ್ರತಿಯೊಬ್ಬರೂ ಹೈದರಾಬಾದ್‌ ಕ್ಷೇತ್ರವನ್ನು ಕಸಿದುಕೊಳ್ಳಲು ಬಯಸುತ್ತಾರೆ. ಹೈದರಾಬಾದ್‌ನಲ್ಲಿ ಎಂಐಎಂ ಪಕ್ಷವನ್ನು ಎದುರಿಸುವಂತೆ ಪ್ರತಿಯೊಬ್ಬರಿಗೂ ಸವಾಲು ಹಾಕುತ್ತೇನೆ. ಕಾಂಗ್ರೆಸ್‌ ಹಾಗೂ ಬಿಜೆಪಿ ಎರಡೂ ಜತೆಗೂಡಿ ಬೇಕಾದರೂ ಸ್ಪರ್ಧೆ ಮಾಡಲಿ. ಆದರೂ ಅವರು ಗೆಲ್ಲಲು ಆಗುವುದಿಲ್ಲ ಎಂದು ಹೈದರಾಬಾದ್‌ನಲ್ಲಿ ನಡೆದ ಪಕ್ಷದ ಬೃಹತ್‌ ಸಮಾವೇಶದಲ್ಲಿ ಅವರು ಅಬ್ಬರಿಸಿದರು.

ಇದೇ ವೇಳೆ, ಗೋಸಾಗಣೆದಾರರ ಹತ್ಯೆ, ಸರ್ಜಿಕಲ್‌ ದಾಳಿ ಹಾಗೂ ಮುಂದಿನ ಚುನಾವಣೆಗಳನ್ನು ಇಟ್ಟುಕೊಂಡು ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಟೀಕಾಪ್ರಹಾರವನ್ನೂ ನಡೆಸಿದರು.