ನೋಟ್ರೆ-ಡೇಮ್ ಚಚ್‌ರ್ ನವೀಕರಣಕ್ಕೆ 4000 ಕೋಟಿ ರು. ದೇಣಿಗೆ| ಭಾರೀ ಬೆಂಕಿ ಅವಘಡಕ್ಕೆ ಸುಟ್ಟು ಕರಕಲಾದ ಐತಿಹಾಸಿಕ ಚಚ್‌ರ್| ಬೆಂಕಿ ಅವಘಡದ ಬಗ್ಗೆ ಅಧಿಕಾರಿಗಳಿಂದ ಕಾರ್ಮಿಕರ ವಿಚಾರಣೆ| ಬೆಂಕಿಯ ಕೆನ್ನಾಲಿಗೆಗೆ ಚಚ್‌ರ್‍ನ ಮೇಲ್ಛಾವಣಿ ಸಂಪೂರ್ಣ ನಾಶ| ಬೆಂಕಿ ನಂದಿಸಲು 400 ಸಿಬ್ಬಂದಿಯಿಂದ 15 ಗಂಟೆಗಳ ಹರಸಾಹಸ
ಪ್ಯಾರಿಸ್[ಏ.17]: ಭಾರೀ ಬೆಂಕಿ ಅವಘಡಕ್ಕೆ ಸುಟ್ಟು ಕರಕಲು ಆಗಿರುವ ಪ್ಯಾರಿಸ್‌ನಲ್ಲಿರುವ 850 ವರ್ಷಗಳ ಐತಿಹಾಸಿಕ ನೋಟ್ರೆ-ಡೇಮ್ ಕ್ಯಾಥೆಡ್ರಲ್ ಪುನರ್ ನವೀಕರಣಕ್ಕಾಗಿ ದೇಣಿಗೆಗಳು ಮತ್ತು ಸಹಾಯದ ಮಹಾಪೂರವೇ ಹರಿದುಬಂದಿದೆ. ಘಟನೆ ನಡೆದು ಕೇವಲ 15 ಗಂಟೆಯಲ್ಲಿ ಚಚ್‌ರ್‍ನ ಪುನರ್ ನವೀಕರಣಕ್ಕಾಗಿ 4 ಸಾವಿರ ಕೋಟಿ ರು.(564 ಮಿಲಿಯನ್ ಡಾಲರ್) ದೇಣಿಗೆ ರೂಪದ ನೆರವು ಹರಿದುಬಂದಿದೆ ಎಂದು ಚಚ್‌ರ್ ಫೌಂಡೇಶನ್ಸ್ ಹೇಳಿದೆ. ಅಲ್ಲದೆ, ಚಚ್‌ರ್ ನವೀಕರಣದ ದೇಣಿಗೆ ಸಂಗ್ರಹಿಸಲು ಕ್ರೌಡ್‌ಫಂಡಿಂಗ್ ಸಹ ಆರಂಭಿಸಲಾಗಿದೆ ಎನ್ನಲಾಗಿದೆ.
ಏತನ್ಮಧ್ಯೆ, ಬೆಂಕಿ ಅವಘಡದ ಬಗ್ಗೆ ಪ್ರೆಂಚ್ ಅಧಿಕಾರಿಗಳು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ಪ್ರೆಂಚ್ ಮತ್ತು ವಿಶ್ವವನ್ನೇ ದಿಗ್ಭ್ರಮೆ ಕೂಪದಕ್ಕೆ ತಳ್ಳಿದ ಬೆಂಕಿ ಅವಘಡಕ್ಕೆ ಕಾರಣವೇನು ಎಂಬ ಬಗ್ಗೆ ಚಚ್‌ರ್‍ನ ನವೀಕರಣದಲ್ಲಿ ಭಾಗಿಯಾಗಿದ್ದ ಕಟ್ಟಡ ನಿರ್ಮಾಣ ಕಾರ್ಮಿಕರನ್ನು ಪ್ರಶ್ನಿಸಲಾಗುತ್ತಿದೆ.
ಈ ಬಗ್ಗೆ ಮಂಗಳವಾರ ಮಾತನಾಡಿದ ನೋಟ್ರೆ-ಡೇಮ್ ಕ್ಯಾಥೆಡ್ರಲ್ ಚಚ್‌ರ್‍ನ ಸಹಾಯಕ ಬಿಷಪ್ ಫಿಲಿಪ್ ಮಾರ್ಸೆಟ್ ಅವರು, ‘ಬೆಂಕಿಯ ಕೆನ್ನಾಲಿಗೆಗೆ ಚಚ್‌ರ್ ನೆಲಸಮವಾಗುವುದನ್ನು ಕಂಡ ಸಾರ್ವಜನಿಕರು ಕಣ್ಣೀರು ಸುರಿಸಿದ್ದರು. ಈ ಘಟನೆಯು ನಮ್ಮನ್ನು ತಬ್ಬಿಬ್ಬುಗೊಳಿಸಿದ ಘಟನೆಯಾಗಿದೆ. ಆದಾಗ್ಯೂ ನಾವು ವಿಚಲಿತರಾಗುವುದಿಲ್ಲ,’ ಎಂದರು.
ಚಚ್‌ರ್‍ನ ಮೇಲ್ಛಾವಣಿ ಸಂಪೂರ್ಣ ನಾಶವಾಗಿದೆ. ಚಚ್‌ರ್‍ನಲ್ಲಿ ಅಳವಡಿಸಲಾಗಿದ್ದ ಕಲಾಕೃತಿಗಳು ಹಾಗೂ ಪೇಂಟಿಂಗ್‌ಗಳು ಸಹ ಹಾನಿಗೊಳಗಾಗಿವೆ. ಆದರೆ, ಬೆಲ್ ಟವರ್‌ಗಳು ಮತ್ತು ಕಿಟಕಿಗ ಗಾಜುಗಳು ಉಳಿದುಕೊಂಡಿವೆ.
ಸೋಮವಾರ ಸಂಜೆ ಹೊತ್ತಿಕೊಂಡಿದ್ದ ಬೆಂಕಿ ನಂದಿಸಲು ಅಗ್ನಿಶಾಮಕದ ದಳದ ಸುಮಾರು 400 ಸಿಬ್ಬಂದಿ ಸೋಮವಾರ ರಾತ್ರಿ ಸೇರಿದಂತೆ ನಿರಂತರ 15 ಗಂಟೆಗಳ ಕಾಲ ಕಾರ್ಯ ನಿರ್ವಹಿಸಿದ್ದರು.
