ನವದೆಹಲಿ[ಆ.19]: 2019ರ ಲೋಕಸಭಾ ಚುನಾವಣೆಯಲ್ಲಿ ಸೋಲುಂಡ ವಿವಿಧ ಪಕ್ಷಗಳ 200ಕ್ಕೂ ಹೆಚ್ಚು ಸಂಸದರು ದೆಹಲಿಯ ಐಷಾರಾಮಿ ಲ್ಯೂಟನ್ಸ್‌ ಪ್ರದೇಶದಲ್ಲಿನ ಅಧಿಕೃತ ಸರ್ಕಾರಿ ನಿವಾಸಗಳಲ್ಲೇ ವಾಸವಾಗಿದ್ದಾರೆ. ಮಾಜಿ ಲೋಕಸಭಾ ಸದಸ್ಯರು ಲೋಕಸಭೆ ವಿಸರ್ಜನೆಯಾದ 1 ತಿಂಗಳ ಅವಧಿಯಲ್ಲಿ ತಮಗೆ ನೀಡಲಾದ ಸರ್ಕಾರಿ ಬಂಗಲೆ ಖಾಲಿ ಮಾಡಬೇಕೆಂಬ ನಿಯಮವಿದೆ.

ಆದರೆ, 16ನೇ ಲೋಕಸಭೆ ವಿಸರ್ಜನೆಯಾಗಿ 3 ತಿಂಗಳು ಕಳೆದರೂ, 2014ರಲ್ಲಿ ಸರ್ಕಾರ ನೀಡಿದ್ದ ಅಧಿಕೃತ ಬಂಗಲೆಗಳನ್ನು 200ಕ್ಕೂ ಹೆಚ್ಚು ಮಾಜಿ ಸಂಸದರು ಖಾಲಿ ಮಾಡದೆ, ಅಲ್ಲೇ ಠಿಕಾಣಿ ಹೂಡಿದ್ದಾರೆ. ಇದರಿಂದಾಗಿ ಲೋಕಸಭೆಗೆ ಆಯ್ಕೆಯಾದ ನೂತನ ಸಂಸದರಿಗೆ ಸರ್ಕಾರಿ ನಿವಾಸ ಕಲ್ಪಿಸುವುದು ಸರ್ಕಾರಕ್ಕೆ ತಲೆನೋವಾಗಿ ಪರಿಣಮಿಸಿದ್ದು, ನೂತನ ಸಂಸದರು ವೆಸ್ಟರ್ನ್‌ ಕೋರ್ಟ್‌ ಹಾಗೂ ಇತರೆ ಅತಿಥಿ ಗೃಹಗಳಲ್ಲಿ ತಾತ್ಕಾಲಿಕವಾಗಿ ವಾಸಿಸುವ ಅನಿವಾರ್ಯತೆ ನಿರ್ಮಾಣವಾಗಿದೆ.

ಈ ಹಿಂದಿನ ದಿನಗಳಲ್ಲಿ ಲೋಕಸಭೆಗೆ ಆಯ್ಕೆಯಾಗುವ ನೂತನ ಸಂಸದರಿಗೆ ಸರ್ಕಾರದ ಅಧಿಕೃತ ನಿವಾಸ ಗೊತ್ತು ಮಾಡುವವರೆಗೂ ಅವರು, ಫೈಸ್ಟಾರ್‌ ಸೇರಿದಂತೆ ಇನ್ನಿತರ ಐಷಾರಾಮಿ ಹೋಟೆಲ್‌ಗಳಲ್ಲಿ ತಾತ್ಕಾಲಿಕವಾಗಿ ವಾಸಿಸುತ್ತಿದ್ದರು. ಆದರೆ, ಸರ್ಕಾರದ ದುಂದುವೆಚ್ಚಗಳನ್ನು ತಡೆಯುವ ನಿಟ್ಟಿನಲ್ಲಿ ಈ ಬಾರಿ ನೂತನ ಲೋಕಸಭಾ ಸದಸ್ಯರಿಗೆ ಅತಿಥಿ ಗೃಹಗಳಲ್ಲಿ ವಾಸಿಸಲು ಅವಕಾಶ ಮಾಡಿಕೊಡಲಾಗಿದೆ.